
ಹಿರಿಯೂರು :
ನಗರದ ಸ್ವಚ್ಛತೆ ನಿರ್ವಹಣೆ ಮಾಡುವ ಮೂಲಕ ನಗರದ ನಾಗರೀಕರ ಆರೋಗ್ಯ ಸುರಕ್ಷತೆಯನ್ನು ಕಾಪಾಡುವ ಪೌರಕಾರ್ಮಿಕರು ಎರಡನೇ ವೈದ್ಯರು, ವೈದ್ಯರು ಜನರನ್ನು ರೋಗಬಂದ ನಂತರ ಚಿಕಿತ್ಸೆ ನೀಡಿದರೆ ಪೌರಕಾರ್ಮಿಕರು ರೋಗ ಬರದಂತೆ ರಕ್ಷಣೆ ಮಾಡುತ್ತಾರೆ ಎಂಬುದಾಗಿ ಪೌರಾಯುಕ್ತರಾದ ಎ.ವಾಸೀಂ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ “ಕಾರ್ಮಿಕರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು, ತಮ್ಮ ವೇತನದಲ್ಲಿ ಒಂದಿಷ್ಟು ಭಾಗವನ್ನು ಭವಿಷ್ಯಕ್ಕೆ ಉಳಿತಾಯ ಮಾಡುವ ಜೊತೆಗೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಉದ್ಯೋಗಸ್ಥರಾಗಿ ಮಾಡಬೇಕು ಎಂಬುದಾಗಿ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಸಮವಸ್ತ್ರ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಟಿ.ಸುನೀಲ್ ಕುಮಾರ್, ಲೆಕ್ಕ ಅಧೀಕ್ಷಕ ಗೋವಿಂದರಾಜ್, ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ಅಧಿಕಾರಿ ಜಬೀವುಲ್ಲಾ, ಸಮುದಾಯ ಸಂಘಟನಾ ಅಧಿಕಾರಿ ನಾಗರತ್ನಮ್ಮ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತರಾಜು, ಕಚೇರಿಯ ವಿವಿಧ ಶಾಖೆಗಳ ಮುಖ್ಯಸ್ಥರು, ಸಿಬ್ಬಂದಿವರ್ಗದವರು, ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
