
ಹಿರಿಯೂರು :
ಸಮಾಜಕ್ಕೆ ಜ್ಞಾನದ ಬೆಳಕನ್ನು ನೀಡುವ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ಹಾಗೂ ಮಹತ್ವವಾದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಸದಾ ಶ್ರಮಿಸುತ್ತಾ ಈ ದೇಶದ ಭಾವೀ ಪ್ರಜೆಗಳನ್ನು ರೂಪಿಸುತ್ತಿರುವ ಎಲ್ಲಾ ಶಿಕ್ಷಕ-ಶಿಕ್ಷಕಿಯರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂಬುದಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಡಿ.ಟಿ.ಶ್ರೀನಿವಾಸ್ ಅವರು ಹೇಳಿದರು.
ನಗರದ ಗುರುಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಶಿಕ್ಷಕರದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿಫುಲೆಯವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶಿಕ್ಷಕರ ದಿನಾಚರಣೆಯಂತಹ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಗುರುಭವನವನ್ನು ಆಧುನಿಕ ರೀತಿಯಲ್ಲಿ ನವೀಕರಣ ಮಾಡುವುದು ನಮ್ಮ ಉದ್ದೇಶವಾಗಿತ್ತು, ಆದರೆ ಅದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ, ಆದ್ದರಿಂದ ಇನ್ನು ನೀವು ಈ ಹಳೆ ಗುರುಭವನದಲ್ಲಿ ಗಾಳಿ ಇಲ್ಲದೆ ಶಕೆಯಲ್ಲಿ ಗಾಳಿ ಬೀಸಿಕೊಂಡು ಕಾರ್ಯಕ್ರಮ ಮಾಡುವಂತಾಗಿದೆ.
ಈಗಲೂ ಕಾಲ ಮಿಂಚಿಲ್ಲ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಕರಿಸಿದರೆ ಅಗತ್ಯ ಅನುದಾನ ತಂದು ಅತ್ಯಾಧುನಿಕ ರೀತಿಯಲ್ಲಿ ನೀವು ಆರಾಮವಾಗಿ ಉಲ್ಲಾಸದಿಂದ ಕುಳಿತು ಕಾರ್ಯಕ್ರಮ ಕೇಳುವಂತೆ ಈ ಗುರುಭವನವನ್ನು ಆಧುನಿಕ ರೀತಿಯಲ್ಲಿ ನಿರ್ಮಾಣ ಮಾಡೋಣ ಇದರಿಂದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಅವರ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ, ಮದುವೆ ಸಮಾರಂಭಗಳಿಗೆ ಗುರುಭವನ ಬಳಕೆಯಾಗಬೇಕು ಎಂಬುದು ನನ್ನ ಆಶಯವಾಗಿದೆ.
ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಕ್ಷೇತ್ರದ ಶಾಸಕರಾಗಿದ್ದಾಗ ಶಿಕ್ಷಣಾಧಿಕಾರಿಗಳ ನೂತನ ಕಚೇರಿಯನ್ನು ಈ ಸ್ಥಳದಲ್ಲಿ ಕಟ್ಟುವಾಗ ಅನೇಕರು ಇದನ್ನು ಬಲವಾಗಿ ವಿರೋಧಿಸಿದ್ದರು, ಆದರೆ ಯಾರ ಪ್ರಭಾವಕ್ಕೂ ನಾವು ಮಣಿಯದೆ ನೂತನ ಕಚೇರಿಯನ್ನು ಇಲ್ಲಿ ನಿರ್ಮಿಸಲಾಯಿತು, ನಮ್ಮ ಯೋಜನೆಯಂತೆ ಕಟ್ಟಡ ನಿರ್ಮಿಸಿದ್ದರೆ ಆ ಕಟ್ಟಡದಲ್ಲಿ ಸಭಾಂಗಣ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತಿದ್ದವು,
ಆದರೆ ಹಾಗಾಗಲಿಲ್ಲ, ಆದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೂತನ ಕಟ್ಟಡ ಬಸ್ ನಿಲ್ದಾಣದ ಎದುರು ನಿರ್ಮಾಣವಾದದ್ದು ನಮಗೆ ಸಮಾಧಾನ ತಂದಿದೆ, ಇದರಿಂದ ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿ-ಪೋಷಕರಿಗೆ, ಶಿಕ್ಷಕ-ಶಿಕ್ಷಕಿಯರಿಗೆ ಅತ್ಯಂತ ಅನುಕೂಲವಾಗಿದೆ ಎಂಬುದಾಗಿ ಅವರು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾನಿಲಯದ ನಿರ್ದೇಶಕರು ಮತ್ತು ಕನ್ನಡಭಾರತಿ ಪ್ರಾಧ್ಯಾಪಕರಾದ ಡಾ.ನಲ್ಲಿಕಟ್ಟೆ ಎಸ್.ಸಿದ್ದೇಶ್ ಮಾತನಾಡಿ, ಆದರ್ಶ ಶಿಕ್ಷಕರಾಗಿ ಹೆಸರು ಮಾಡಿದ, ಶಿಕ್ಷಕರ ಕುಲಕ್ಕೆ ತಿಲಕವನ್ನಿಟ್ಟು ಪೂಜಿಸಿದಂತಹ, ಶಿಕ್ಷಕರ ಸ್ಥಾನಕ್ಕೆ ಮಹತ್ವದ ಗೌರರವನ್ನು ತಂದುಕೊಟ್ಟಂತಹ ಕೀರ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರಿಗೆ ಸಲ್ಲುತ್ತದೆ, ಅವರ ಋಣ ತೀರಿಸಬೇಕಾದರೆ ನಮ್ಮ ಶಿಕ್ಷಕ ವೃತ್ತಿಯನ್ನು ಅರ್ಥಪೂರ್ಣವಾಗಿ ನಿರ್ವಹಿಸಬೇಕು ಎಂದರಲ್ಲದೆ,
ಶಿಕ್ಷಕರಾದ ನಾವುಗಳು ನಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಬೇಕು, ನಮ್ಮ ಸಮಾಜದ ವೈದ್ಯ, ಪೋಲೀಸ್, ಸೈನಿಕ, ಇಂಜಿನಿಯರ್ ಹೀಗೆ ಎಲ್ಲಾ ವೃತ್ತಿಗಳನ್ನು ಹುಟ್ಟುಹಾಕುವ ಶಕ್ತಿ ನಮ್ಮ ಶಿಕ್ಷಕವೃಂದದವರಿಗಿದ್ದು, ಇಂತಹ ಪವಿತ್ರವಾದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಶಿಕ್ಷಕರು ಯಾವುದೇ ಸ್ವಾರ್ಥವಿಲ್ಲದೆ ನಿರ್ವಂಚನೆಯಿಂದ ವಿದ್ಯಾರ್ಥಿಗಳನ್ನು ಶ್ರೇಷ್ಠ ವ್ಯಕ್ತಿಗಳಾಗಿ ನಿರ್ಮಾಣ ಮಾಡಿ, ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದಾಗಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಅತ್ಯಂತ ಉತ್ತಮ ಹಾಗೂ ಅತ್ಯಂತ ಪ್ರತಿಭಾವಂತ ಶಿಕ್ಷಕ-ಶಿಕ್ಷಕಿಯರಿದ್ದು, ಕಳೆದ ಸಾಲಿಗಿಂತ ಶೈಕ್ಷಣಿಕ ಪ್ರಗತಿಯಲ್ಲಿ ಈ ಸಾಲಿನಲ್ಲಿ ಸುಮಾರು ಶೇ.27 ರಷ್ಟು ಪ್ರಗತಿ ಸಾಧಿಸಲಾಗಿದೆ, ಇದಕ್ಕಾಗಿ ಈ ಶಿಕ್ಷಕ ದಿನಾಚರಣೆಯಂದು ಅವರಿಗೆ ಅನಂತಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರಲ್ಲದೆ,
ಇಂದು ಇಂತಹ ಶಿಕ್ಷಕ-ಶಿಕ್ಷಕಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರನ್ನು ಗುರುತಿಸಿ, ಪ್ರಶಸ್ತಿಪತ್ರ ನೀಡಿಸನ್ಮಾನಿಸಲಾಗುತ್ತಿದ್ದು, ಜೊತೆಗೆ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ನಮ್ಮ ಶಿಕ್ಷಕರುಗಳು ಶಾಲಾ ಪಠ್ಯ ಚಟುವಟಿಕೆಗಳ ಜೊತೆಗೆ ಸ್ಯಾಟ್ಸ್ ಎಂಟ್ರಿ, ಮಕ್ಕಳಹಾಜರಾತಿ, ಎಲ್.ಬಿ.ಎಸೇರಿದಂತೆ ವಿವಿಧ ಅಂಶಗಳನ್ನು ಸಮಯಕ್ಕೆ ಸರಿಯಾಗಿ ದಾಖಲಿಸಿ, ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂಬುದಾಗಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಖಾಸಗಿ ಅನುದಾನರಹಿತ ಶಾಲೆಗಳ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾನಿಲಯದ ನಿರ್ದೇಶಕರು ಮತ್ತು ಕನ್ನಡಭಾರತಿ ಪ್ರಾಧ್ಯಾಪಕರಾದ ಡಾ.ನಲ್ಲಿಕಟ್ಟೆಎಸ್.ಸಿದ್ದೇಶ್, ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಟಿ.ಎಸ್ ಶ್ರೀನಿವಾಸ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ರಮೇಶ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷೆ ಶ್ರೀಮತಿ ವಿ.ಭಾಗ್ಯ, ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಆರ್.ನರೇಂದ್ರ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಲೋಹಿತ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹನುಮಂತರೆಡ್ಡಿ, ರಮೇಶ್ ನಾಯ್ಕ, ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ಸುನಂದಮ್ಮ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಜಗದೀಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮೂರ್ತಿ, ನಾಗರಾಜ್, ಪ್ರಾಥಮಿಕ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ, ಉರ್ದು ಶಿಕ್ಷಕರ ಸಂಘದ ಕುಷ್ಬುದಾ, ಇಸಿಓಗಳಾದ ನಾಗರಾಜ್, ಸೈಯದ್ ಜಾಫರ್, ಮಲ್ಲಿಕಾರ್ಜುನ್, ರಂಗಸ್ವಾಮಿ, ಸಿ.ಆರ್.ಪಿಗಳಾದ ಪ್ರಸನ್ನ, ನಾಗರಾಜ್, ಕರಿಯಪ್ಪ, ಆಶಾಲತಾ, ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ನೌಕರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಶಿಕ್ಷಣ ಸಂಯೋಜಕರಾದ ಶಿವಾನಂದ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ರಾಧಾಹಬ್ಬಿನಹೊಳೆ ಹಾಗೂ ಗಿರೀಶ್ ವಿ.ಕೆ.ಗುಡ್ಡ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ಇಸಿಓ ಪುಟ್ಟಸ್ವಾಮಿ ವಂದನಾರ್ಪಣೆ ನೆರವೇರಿಸಿದರು.
