September 13, 2026
004

ಹಿರಿಯೂರು:     

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೆಡಿನಾಳ ಗ್ರಾಮದಲ್ಲಿ ದಲಿತ ಮುಖಂಡ ಭೀಮಾನಂದ ಇನ್ನವೂರು ಅವರ ಬರ್ಬರ ಹತ್ಯೆ ಮಾಡಿರುವುದು ನಿಜಕ್ಕೂ ಖಂಡನೀಯ, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂಬುದಾಗಿ ಕರ್ನಾಟಕ ಭೀಮ್ ಸೇನೆಯ ರಾಜ್ಯ ಕಾರ್ಯದರ್ಶಿ ವಿ.ಶಿವಕುಮಾರ್ ಒತ್ತಾಯಿಸಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಭೀಮ್ ಸೇನೆ, ಹಿರಿಯೂರು ತಾಲ್ಲೂಕು ಸಮಿತಿ ವತಿಯಿಂದ ಭೀಮಾನಂದ ಇನ್ನವೂರು ಹತ್ಯೆ ಖಂಡಿಸಿ, ಕಠಿಣ ಕ್ರಮಕ್ಕೆ ಒತ್ತಾಯಿಸಿ, ತಾಲ್ಲೂಕು ತಹಶೀಲ್ದಾರ್‌ರವರ ಮೂಲಕ ಮಾನ್ಯ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಿ, ಮಾತನಾಡಿದರು.

ಭೀಮಾನಂದ ಇನ್ನವೂರು ಅವರ ಹತ್ಯೆಯ ಸಂಪೂರ್ಣ ಸತ್ಯಾಂಶ ಹೊರಬರಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸುವುದರ ಜೊತೆಗೆ ನ್ಯಾಯಸಮ್ಮತ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಅಗತ್ಯ ಸರ್ಕಾರಿ ನೆರವು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಲಿತ ಯುವತಿಯರು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನಿನ ಆಡಳಿತವನ್ನು ಬಲಪಡಿಸಿ, ಅಪರಾಧಿಗಳಿಗೆ ಯಾವುದೇ ರೀತಿಯ ರಕ್ಷಣೆ ನೀಡದೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆಯ ರಾಜ್ಯ ಕಾರ್ಯದರ್ಶಿ ವಿ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಮಹೇಶ್ ವೈ., ತಾಲ್ಲೂಕು ಕಾರ್ಯಾಧ್ಯಕ್ಷ ತಿಮ್ಮಯ್ಯ, ತಾಲ್ಲೂಕು ಉಸ್ತುವಾರಿ ಸುರೇಶ್ ಎಸ್. ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಮಾರುತಿ, ಜಿಲ್ಲಾ ಕಾರ್ಯದರ್ಶಿ ದುರ್ಗೇಶ್ ಘಾಟ್,ಸೇರಿದಂತೆ ತಾಲ್ಲೂಕು ಹಾಗೂ ನಗರ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *