
ಹಿರಿಯೂರು :
ರಾಜಕೀಯ ಅಧಿಕಾರ ಇದ್ದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಹೊಂದಲು ಸಾಧ್ಯ, ಕೆಪಿಸಿಸಿ ಅಧ್ಯಕ್ಷರ ಆಶೀರ್ವಾದ ಸಿಕ್ಕಿದೆ, ಇನ್ನಿಬ್ಬರು ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ಕೊಡುತ್ತೇನೆ ಎಂಬುದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿ.ಜೆ.ಎನ್.ಎಲ್. ನಿವೃತ್ತ ಎಂ.ಡಿ.ಸಣ್ಣಚಿತ್ತಯ್ಯ ಹೇಳಿದರು.
ನಗರದ ಹೊರವಲಯದ ಹೊಸದುರ್ಗ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಉಪಚುನಾವಣೆಯ ಮುಂದಿನ ಬೆಳವಣಿಗೆ ಹಾಗೂ ಕಾರ್ಯ ಯೋಜನೆ ಬಗ್ಗೆ ನೂರಾರು ಪಕ್ಷತೀತ ಮುಖಂಡರೊಂದಿಗೆ ಸಭೆ ನಡೆಸಿ, ನಂತರ ಅವರು ಮಾತನಾಡಿದರು.
ಕ್ಷೇತ್ರದ ಜನತೆ ತೋರಿದ ಪ್ರೀತಿ, ಅಭಿಮಾನ ನಾನು ಎಂದಿಗೂ ಮರೆಯುವುದಿಲ್ಲ, ಈ ಕ್ಷೇತ್ರದ ಜನರ ಋಣವನ್ನು ತೀರಿಸುವ ಕೆಲಸ ನಾನು ಮಾಡುತ್ತೇನೆ, ನನಗೆ ಆತ್ಮವಿಶ್ವಾಸವಿದೆ, ತಾಳಿದವನು ಬಾಳಿಯಾನು ಎಂಬಂತೆ ನನಗೆ ಟಿಕೆಟ್ ಸಿಗಲಿದೆ, ವರಿಷ್ಠರು ಕೂಡ ಧೃತಿಗೆಡಬಾರದು ಎಂಬ ಸೂಚನೆ ನೀಡಿದ್ದಾರೆ, ನನಗೆ ಅಧಿಕಾರ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆ ನನಗಿದೆ.
ನಾನು ಜನಸೇವೆಗೆ ಬಂದಿದ್ದೇನೆ, ನಾವು ಗುರಿ ಸಾಧಿಸುವಾಗ ರಾಜಕೀಯ ಅಧಿಕಾರ ಹಿಡಿಯಬೇಕು ಈಗಾಗಲೇ ವರಿಷ್ಠರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ, ಇನ್ನು ಮುಂದೆ ನಾನು ಸದಾ ಹಿರಿಯೂರಿನಲ್ಲಿ ಉಳಿಯುವ ಮೂಲಕ ತಾಲ್ಲೂಕಿನ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದರು.
ತಾಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇತ್ತ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿರುವ ವಾಣಿವಿಲಾಸಸಾಗರ ಜಲಾಶಯವಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಹಿರಿಯೂರಿನ ಚಿತ್ರಣ ಬದಲಾವಣೆ ಹೊಂದುವ ಕಾಲ ಸನ್ನಿಹಿತವಾಗಿದೆ ನವಂಬರ್ ಅಥವಾ ಸಂಕ್ರಾಂತಿ ವೇಳೆಗೆ ತುಂಗಾ ನದಿಯಿಂದ ಭದ್ರಾ ನದಿಗೆ 17.40 ಟಿಎಂಸಿ ನೀರು ಹರಿಯುವ ಕಾಲ ಹತ್ತಿರವಾಗಿದೆ ಎಂಬುದಾಗಿ ತಿಳಿಸಿದರು.
ಉಪ್ಪಾರ ಜನಾಂಗದ ತಾಲೂಕು ಅಧ್ಯಕ್ಷ ಪದ್ಮನಾಭ ಮಾತನಾಡಿ, ಸಣ್ಣಚಿತ್ತಯ್ಯನವರ ಪ್ರವಾಸ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ತಂದಿದೆ, 2013ರ ಚುನಾವಣೆ ಟಿಕೆಟ್ ತಿರುವು ಪಡೆದುಕೊಳ್ಳದಂತೆ ನಾವು ನೋಡಿಕೊಳ್ಳಬೇಕು, ಸಣ್ಣಚಿತ್ತಯ್ಯ ಅವರಿಗೆ ಟಿಕೆಟ್ ಕೊಡುವ ಎಲ್ಲಾ ನಿರೀಕ್ಷೆ ಇದೆ, ಕಾಂಗ್ರೆಸ್ ಪಕ್ಷ ತಪ್ಪು ನಿರ್ಧಾರ ಕೈಗೊಳ್ಳಬಾರದು. ಸಣ್ಣ ಚಿತ್ತಯ್ಯ ಅವರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿದುಕೊಳ್ಳಲು ಸಾಧ್ಯ, ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದರೆ ಮುಂದಿನ ಬೆಳವಣಿಗೆಗಳು ಬೇರೆ ರೀತಿಯಲ್ಲಿ ಇರುತ್ತವೆ ಎಂಬುದಾಗಿ ಪಕ್ಷದ ನಾಯಕರಿಗೆ ಎಚ್ಚರಿಸಿದರು.
ಕೃಷಿಕ ಸಮಾಜದ ನಿರ್ದೇಶಕ ಎಚ್.ಆರ್.ತಿಮ್ಮಯ್ಯ ಮಾತನಾಡಿ, ಕ್ಷೇತ್ರದಲ್ಲಿ ಸುಧಾಕರ್ ಅವರ ಆಡಳಿತ ಉತ್ತಮವಾಗಿರಲಿಲ್ಲ, ಜಿಲ್ಲೆಯಲ್ಲಿ ಕಾಡುಗೊಲ್ಲರು ಮತ್ತು ಕುಂಚಿಟಿಗರು ರಾಜಕೀಯದಿಂದ ವಂಚಿತರಾಗಿದ್ದಾರೆ, ಸಣ್ಣಚಿತ್ತಯ್ಯ ಅವರು ಆಡಳಿತದಲ್ಲಿ ಚತುರತೆ ಹೊಂದಿರುವ ವ್ಯಕ್ತಿ ಇಂತಹವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದ ಅಭಿವೃದ್ಧಿಯತ್ತ ಸಾಗಲಿದೆ. ಸುಹಾಸ್ ಸುಧಾಕರ್ ಗೆ ಆಡಳಿತ ಚತುರತೆ ಇಲ್ಲ, ಹಿರಿಯೂರು ಕ್ಷೇತ್ರ ನೀರಾವರಿ ವಂಚಿತವಾಗಿರಲು ಸುಧಾಕರ್ ಅವರೇ ನೇರ ಕಾರಣ ಎಂದು ಆರೋಪಿಸಿದರು.
ಕೃಷ್ಣಾಪುರ ಕೃಷ್ಣಮೂರ್ತಿ ಮಾತನಾಡಿ, ನೀರಾವರಿಯ ವಿಚಾರದಲ್ಲಿ ಸಣ್ಣಚಿತ್ತಯ್ಯ ಅವರಿಗೆ ಬದ್ಧತೆ ಇದೆ, ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದರೆ ಪಕ್ಷಾತೀತವಾಗಿ ನಮ್ಮ ಬೆಂಬಲವಿದೆ, ಭದ್ರ ಡ್ಯಾಮ್ ತುಂಬಿದೆ ನಿಮ್ಮ ಪ್ರಯತ್ನದಿಂದ ಸರ್ಕಾರದ ಮೇಲೆ ಒತ್ತಡ ತಂದು ಮುಂದಿನ ದಿನಗಳಲ್ಲಿ ವಿವಿಸಾಗರ ಡ್ಯಾಮ್ ಗೆ ನೀರು ಹರಿಸಲು ಪ್ರಯತ್ನಿಸಬೇಕು, ಟಿಕೆಟ್ ತಗೊಂಡು ಬಂದರೆ ಗೆಲುವು ನಿಮ್ಮದೇ ಎಂದರು.
ಇದೇ ಸಂದರ್ಭದಲ್ಲಿ ಎಸ್.ಟಿ.ಕೃಷ್ಣಮೂರ್ತಿ, ಕಾಡುಗೊಲ್ಲಸಂಘದ ಅಧ್ಯಕ್ಷ ಪಿ.ಆರ್.ದಾಸ್, ತಿಪ್ಪೇಸ್ವಾಮಿಕೋಡಿಹಳ್ಳಿ, ಕಲ್ಲಹಟ್ಟಿತಿಪ್ಪೇಸ್ವಾಮಿ, ಸದಾನಂದ, ಶರೀಫ್ ಜಾನ್, ಬಿ.ಶೇಖರ್, ಇವರುಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪೀರಯ್ಯ, ಬಿ.ಕೆ.ಉಗ್ರಮೂರ್ತಿ, ಎಸ್.ಆರ್.ತಿಪ್ಪೇಸ್ವಾಮಿ, ವಕೀಲ ಯತೀಶ್, ಧರ್ಮಪುರ ಶಿವಣ್ಣ, ನೌಶತ್ ಕೆಆರ್.ಹಳ್ಳಿ, ರವಿ ವಿವಿಪುರ, ಪೆರಿಸ್ವಾಮಿ ಜೆಜಿಹಳ್ಳಿ, ಮಹೇಶ್, ಗೌಡಹಳ್ಳಿ ಶಿವಣ್ಣ, ಚಿಕ್ಕಣ್ಣ ಅಮ್ಮನಟ್ಟಿ, ಕೇಶವ್, ಸಿಗೆಟ್ಟಿದಾಸಪ್ಪ, ತಿಮ್ಮರಾಯಪ್ಪ, ಪ್ರಭು ಯಾದವ್, ಮಂಜುನಾಥ್, ಉಡುವಳ್ಳಿ ಶಂಭು, ಪರಮೇನಹಳ್ಳಿ ಗುಂಡೇಗೌಡರ ಮಗ ಶಿವಮೂರ್ತಿ, ಮಹಾಲಿಂಗಪ್ಪ, ಮೂಡಲಪ್ಪ, ಮುದ್ದನಕುಂಟೆನಾಗಪ್ಪ ಸೇರಿದಂತೆ ನೂರಾರು ಬೆಂಬಲಿಗರು ಉಪಸ್ಥಿತರಿದ್ದರು.
