
ಹಿರಿಯೂರು :
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಹಾಗೂ ನಿರಂತರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ “ಕರುನಾಡಸೇವಾರತ್ನ”ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘಟನೆಯ ವತಿಯಿಂದ ನೆಲಮಂಗಲದ ಪುಷ್ಪ ಬೈರೇಗೌಡ ಕಲ್ಯಾಣಮಂಟಪದಲ್ಲಿ ದಿನಾಂಕ 08/08/2026 ರ ಶನಿವಾರದಂದು ಆಯೋಜಿಸಲಾಗಿದ್ದ 4ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಬಸವನಹಳ್ಳಿ ಶಿವಾನಂದ ಆಶ್ರಮದ ರಮಾನಂದಸ್ವಾಮೀಜಿ ಹಾಗೂ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ, ಕಳೆದ 35 ವರ್ಷಗಳಿಂದ ಸಮಾಜದ ಜನರ ಧ್ವನಿಯಾಗಿ ಪತ್ರಿಕಾರಂಗದಲ್ಲಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಜನಪರ ವರದಿ ಮಾಡುವ ಮೂಲಕ ತಮ್ಮದೇ ಆದ ಹೆಸರು ಮಾಡಿರುವ ಆಲೂರುಹನುಮಂತರಾಯಪ್ಪರವರು ಸಾಮಾಜಿಕ ಕಾಳಜಿ ಹೊಂದಿರುವ ಪತ್ರಕರ್ತರಾಗಿದ್ದು, ಇವರ ಈ ಸುದೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿರುವುದು ಈ ಪ್ರಶಸ್ತಿಯ ಗೌರವವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎಂಬುದಾಗಿ ಹೇಳಿದರು.

