
ಹಿರಿಯೂರು:
ಕಲೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಕಲಾವಿದರು ತಮ್ಮ ಕುಟುಂಬಕ್ಕೆ ಆಸ್ತಿಯಾಗಿರದೇ ಸಮಾಜದ ಆಸ್ತಿಯಾಗಿದ್ದಾರೆ, ಅಂಥವರನ್ನ ಗುರುತಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಹೇಳಿದರು.
ನಗರದ ಕೆ.ಎಂ.ಕೊಟ್ಟಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾಸಂಘ, ಪರಿಶಿಷ್ಟ ಜಾತಿ ಸೇವಾ ಸಮಿತಿ, ಕೆ.ಎಂ.ಕೊಟ್ಟಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಹಗಲುವೇಷ ಕಲಾಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತೀಕರಣ, ನಗರೀಕರಣ, ಆಧುನೀಕರಣದಿಂದ ದೇಶಿಯ ಕಲೆಗಳಿಗೆ ಪೆಟ್ಟು ಬಿದ್ದಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು, ಜಾನಪದ ನೃತ್ಯ, ಬೀಸುವ ಕಲ್ಲಿನಪದ, ಹಗಲುವೇಷ, ಗೊಂಬೆಕುಣಿತ, ಕೋಲಾಟ, ಭಜನೆ, ಗೊರವನಕುಣಿತ ವೀರಗಾಸೆ ಮುಂತಾದ ಕಲೆಗಳನ್ನು ಪ್ರದರ್ಶನ ಮಾಡುವ ಕಲಾವಿದರನ್ನು ಗುರುತಿಸಿ ಗೌರವಿಸಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸಬೇಕು.
ಆಗಮಾತ್ರ ಯುವ ಜನತೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಅಭಿರುಚಿ ಮೂಡುತ್ತದೆ, ಹಣ ಆಸ್ತಿ ಅಂತಸ್ತು ಸಿರಿತನ ಇದ್ದವರು ಸಾಧನೆ ಮಾಡುವುದು ಸುಲಭ, ಆದರೆ ಹಸಿವು ಬಡತನ ಇದ್ದವರು ಸಾಧನೆ ಮಾಡುವುದು ಕಷ್ಟ ಈ ನಿಟ್ಟಿನಲ್ಲಿ ಕಷ್ಟದಲ್ಲಿ ಸಾಧನೆ ಮಾಡಿದ ಕಲಾವಿದರು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕೆ.ಎಂ.ರಾಜೇಶ್ವರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ತಾಲೂಕು, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಮಂಜಣ್ಣ, ಹಗಲುವೇಷಗಾರರ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷರಾದ ಕೆ.ಎಂ.ಗುರುಮೂರ್ತಿ, ಕಾರ್ಯದರ್ಶಿ ಕೃಷ್ಣಪ್ಪ, ಎಸ್.ಶಿವಮೂರ್ತಿ, ಎಂ.ಹೇಮಗಿರಿ, ಎಲೆನ್ ಮೇರಿ, ಕಲಾವಿದರಾದ ಭಿಕ್ಷಾಪತಿ ಕೂಡ್ಲಿಗಿ, ದುರ್ಗಾಪ್ರಸಾದ್, ಶಾಂತವೀರಪ್ಪ, ರಾಮಾಂಜನೇಯ, ತಮಟೆ ಚಂದ್ರು, ರಂಗಸ್ವಾಮಿ, ಹನುಮಂತರಾಯ, ಕೆ,ಎಂ, ಕೊಟ್ಟಿಗೆ ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಗಲು ವೇಷಗಾರರ ಸಾಂಸ್ಕೃತಿಕ ಕಲಾಸಂಘದ ವತಿಯಿಂದ ಭೀಮಾಂಜನೇಯಯುದ್ದ ಎಂಬ ಕಿರು ನಾಟಕವನ್ನು ಕಲಾವಿದರು ಪ್ರಸ್ತುತಪಡಿಸಿದರು.
