
ಹಿರಿಯೂರು:
ಪ್ರಸ್ತುತ ದಿನಗಳಲ್ಲಿ ಯುವಕ-ಯುವತಿಯರು ವಿದ್ಯಾರ್ಥಿಗಳು ಮೊಬೈಲ್ ಫೇಸ್ಬುಕ್ ವಾಟ್ಸಾಪ್ ಗಳಲ್ಲಿ ಅತಿ ಹೆಚ್ಚಾಗಿ ಅಂಟಿ ಕೊಂಡಿದ್ದಾರೆ ಇವುಗಳಿಂದ ದೂರಬರಲು ಸಾಹಿತ್ಯ, ಸಂಗೀತ, ರಂಗಕಲೆಯ ಹವ್ಯಾಸ ಬೆಳೆಸಬೇಕಿದೆ, ಮಕ್ಕಳಲ್ಲಿರುವ ಸೃಜನಶೀಲತೆ ಹಾಗೂ ಏಕಾಗ್ರತೆ ಹೆಚ್ಚಿಸಲು ಸಾಹಿತ್ಯ, ಸಂಗೀತ, ರಂಗಕಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಬಿ.ಎಂ.ಗುರುನಾಥ್ ಹೇಳಿದರು.

ನಗರದ ವೇದಾವತಿ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸುಗಮಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕಲಿಕಾ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಸಂಗೀತದ ತರಬೇತಿಯನ್ನು ಕಲಿಸುವ ಮೂಲಕ ಮಕ್ಕಳಿಗೆ ಸಂಗೀತ ಸಾಹಿತ್ಯ ಮತ್ತು ರಂಗಕಲೆಯ ಅಭಿರುಚಿಯನ್ನ ಬೆಳೆಸುತ್ತದೆ, ಮಕ್ಕಳು ಮುಂದೆ ದೊಡ್ಡ ಕಲಾವಿದರಾಗಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತ ನಾಡಿನ ಸಾಂಸ್ಕೃತಿಕ ಕಲೆಯಾಗಿದ್ದು, ಕಲೆ ಮತ್ತು ಕಲಾವಿದರನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ,ವಸತಿ ಶಾಲೆ ,ಪಬ್ಲಿಕ್ ಶಾಲೆ ಹಾಗೂ ಪಿಎಂ ಶ್ರೀ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಶಿಕ್ಷಕರನ್ನ ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು,
ರಾಜ್ಯದಲ್ಲಿ 2008ರಿಂದ ಇಲ್ಲಿಯವರೆಗೆ ಸಂಗೀತ ಶಿಕ್ಷಕರ ನೇಮಕವಾಗಿಲ್ಲ ಸಂಗೀತ ಅಧ್ಯಯನ ಮಾಡಿದ ಪದವೀಧರರು ನಿರುದ್ಯೋಗಿಗಳಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳದೆ ಅತಂತ್ರಕ್ಕೆ ಒಳಗಾಗಿದ್ದಾರೆ, ಸರ್ಕಾರ 15000 ಶಿಕ್ಷಕರ ನೇಮಕ ಮಾಡಲು ಗೆಜೆಟ್ ಬಿಟ್ಟಿದೆ ಅದರಲ್ಲಿ ಸಂಗೀತ ಶಿಕ್ಷಕರ ಕೈಬಿಟ್ಟಿದ್ದು, ಬೀದಿ ಪಾಲಾಗುತ್ತಿರುವ ಸಂಗೀತ ಪದವಿದರನ್ನು ಉಳಿಸಲು ಸರ್ಕಾರ 5,000 ಕ್ಕಿಂತ ಹೆಚ್ಚು ಖಾಲಿ ಇರುವ ಸಂಗೀತ ಶಿಕ್ಷಕರನ್ನ ಕೂಡಲೇ ಭರ್ತಿ ಮಾಡಬೇಕೆಂದು ಒತ್ತಾಯಿಸಿದರು,
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಟಿ. ಮೂರುಕಣ್ಣಪ್ಪ, ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ, ಎಂ.ಬಿ.ಲಿಂಗಪ್ಪ, ಸಂಗೀತ ವಿದುಷಿ ಹಾಗೂ ತರಬೇತಿಯ ಶಿಕ್ಷಕಿ ಎನ್.ಜಗದಾಂಬ, ಎನ್.ಬಸವರಾಜು, ಗೀತಾಂಜಲಿ, ರೂಪ, ಮಹಾಲಕ್ಷ್ಮಿ, ಹಾಗೂ ಇತರರು ಉಪಸ್ಥಿತರಿದ್ದರು.
