
ಹಿರಿಯೂರು :
ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸಿ ಏಕಾಗ್ರತೆಯನ್ನು ಉಂಟುಮಾಡಲು “ಯೋಗ ಮತ್ತು ಧ್ಯಾನ” ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರು ಹಾಗೂ ವಿಷಯ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ವಾಗ್ದೇವಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಿರಿಯೂರು ಹಾಗೂ ಶ್ರೀಪತಂಜಲಿ ಯೋಗ ಸಮಿತಿ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಹಿರಿಯೂರು ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರು ಹಾಗೂ ವಿಷಯ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ “ಯೋಗ ಮತ್ತು ಧ್ಯಾನ ತರಬೇತಿ ಕಾರ್ಯಾಗಾರ”ವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಈ 2026-27ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸುವ ಸಂಬಂಧ ಶಾಲೆಯಲ್ಲಿ ಮಕ್ಕಳ ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಿ ಏಕಾಗ್ರತೆಯನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ತಾಲೂಕು ಕ್ರಿಯಾಯೋಜನೆಯ ಭಾಗವಾಗಿ ಈ “ಯೋಗ ಮತ್ತು ಧ್ಯಾನ” ಕಾರ್ಯಗಾರದಲ್ಲಿ ಶಿಕ್ಷಕರಿಗೆ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಈ ಕಾರ್ಯಗಾರದಿಂದ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿ ಶಿಕ್ಷಕರು ಬೋಧಿಸಿದ ವಿಷಯ ಉತ್ತಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸತತ ಬೋಧನೆಯಿಂದ ವಿದ್ಯಾರ್ಥಿಯ ಮನಸ್ಸಿನಲ್ಲಿ ಉಂಟಾಗುವ ಒತ್ತಡ ಮತ್ತು ನಿರಾಸಕ್ತಿಯನ್ನು ಹೋಗಲಾಡಿಸಲು ಶಿಕ್ಷಕರು ಪ್ರತಿದಿನ 10ನಿಮಿಷ ಸರಳವಾದ ಯೋಗ ಮತ್ತು ಧ್ಯಾನ ಮಾಡಿಸಬೇಕು,
ಇದರಿಂದ ಮಕ್ಕಳಲ್ಲಿ ಮತ್ತೆ ಚೇತನ ಉಂಟಾಗಿ ಕಲಿಯುವ ಆಸಕ್ತಿ ಮೂಡುತ್ತದೆ. ಎಲ್ಲ ಶಿಕ್ಷಕರು ತರಬೇತಿಯಲ್ಲಿ ಪಡೆದುಕೊಂಡ ಯೋಗ ಮತ್ತು ಧ್ಯಾನಕ್ಕೆ ಸಂಬಂಧಿಸಿದ ಹಂತಗಳನ್ನು ಶಾಲೆಯ ಮಕ್ಕಳಲ್ಲಿ ರೂಢಿಸಿ, ಪ್ರತಿದಿನ ಅಭ್ಯಾಸ ಮಾಡಿಸುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರೇರೇಪಿಸಬೇಕು ಎಂಬುದಾಗಿ ಹೇಳಿದರು.

ಈ ತರಬೇತಿ ಕಾರ್ಯಾಗಾರದಲ್ಲಿ ಶ್ರೀವಾಗ್ದೇವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಕೆ.ಜಿ.ಶ್ರೀಧರ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತೀಯ ಸಂಚಾಲಕರು ಹಾಗೂ ಸಿಆರ್.ಪಿ ಗಳಾದ ಎ.ಕುಮಾರ್, ಜಿಲ್ಲಾ ಸಂಚಾಲಕರಾದ ಜಿ.ಎಂ.ಉಮೇಶ್ ಗುಡಾಣಮಠ, ತಾಲೂಕು ಸಂಚಾಲಕರಾದ ಜಿ.ವಿ.ಚಂದ್ರಕಾಂತ್, ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕರಾದ ಜಗದೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾದ ಗಿರೀಶ್, ಇ.ಸಿ.ಓ ಕೆ.ರಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ತಾಲೂಕು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿಯಾದ ಜಿ.ಎ.ನಾಗರಾಜು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಪಾಂಡುರಂಗ ಕಾರ್ಯಕ್ರಮದ ನಿರೂಪಣೆ ಮಾಡಿದರು.
