
ಹಿರಿಯೂರು :
ಹಿರಿಯೂರು ತಾಲೂಕು ಬರಪೀಡಿತ ಪ್ರದೇಶವಾಗಿದ್ದು ಈ ವರ್ಷವೂ ಸಹ ಮುಂಗಾರು ಮಳೆ ಆಗದೆ ಅಂತರ್ಜಲ ಕುಸಿದಿದ್ದು, ತಾಲೂಕಿನಲ್ಲಿ ಕೇವಲ ಶೇಕಡ 9 ರಷ್ಟು ಮಾತ್ರ ಬಿತ್ತನೆಯಾಗಿದೆ, ಶೇಕಡ 25ಕ್ಕಿಂತ ಕಡಿಮೆ ಬಿತ್ತನೆ ಆಗಿರುತ್ತದೆ ಎಂಬುದಾಗಿ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಹಿರಿಯೂರು ತಾಲೂಕನ್ನು ಬರಪೇಡಿದ ಪ್ರದೇಶ ಎಂದು ಘೋಷಿಸುವ ಮೂಲಕ “ವಿಶೇಷಪ್ಯಾಕೇಜ್” ನೀಡುವಂತೆ ಒತ್ತಾಯಿಸಿ, ತಾಲೂಕು ತಹಶೀಲ್ದಾರರಾದ ಸಿದ್ದೇಶ್ ರವರ ಮುಖಾಂತರ ಸರ್ಕಾರಕ್ಕೆ ಮನವಿಪತ್ರವನ್ನು ಸಲ್ಲಿಸಿ ನಂತರ ಅವರು ಮಾತನಾಡಿದರು.
ಈ ವರ್ಷದ ಜೂನ್ ತಿಂಗಳಲ್ಲಿ 190 ಮಿಲಿಮೀಟರ್ ಮಳೆ ಆಗಬೇಕಿದ್ದು, ಕೇವಲ 118 ಮಿಲಿಮೀಟರ್ ಮಾತ್ರ ಮಳೆ ಆಗಿರುತ್ತದೆ, ಜುಲೈ ತಿಂಗಳಲ್ಲಿ ಕೇವಲ ಮೂರು ಮಿಲಿಮೀಟರ್ ಕಡಿಮೆ ಮಳೆ ಆಗಿದ್ದು, ಶೇಕಡ 81% ರಷ್ಟು ಮಳೆ ಕೊರತೆ ಉಂಟಾಗಿ, ರೈತರು ಬಿತ್ತಿದ ಎಲ್ಲಾ ಬೆಳೆಗಳು ಸಹ ಒಣಗುತ್ತಿವೆ ಎಂದರಲ್ಲದೆ,
ರೈತರು ನಷ್ಟ ಅನುಭವಿಸಿ ಸಾಲಗಾರರಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಪಡೆದ ರೈತರಿಗೆ ಬ್ಯಾಂಕಿನವರು ನೋಟಿಸ್ ನೀಡುತ್ತಿದ್ದಾರೆ, ಈ ಕೂಡಲೇ ಸರ್ಕಾರ ಹಿರಿಯೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷರಾದ ಬ್ಯಾಡರಹಳ್ಳಿಶಿವಕುಮಾರ್, ತಾಲೂಕು ಯುವ ಘಟಕದ ಅಧ್ಯಕ್ಷರಾದ ಆರ್.ಚೇತನ್ ಯಳನಾಡು, ತಾಲೂಕು ಕಾರ್ಯಾಧ್ಯಕ್ಷರಾದ ಹೆಚ್.ದಸ್ತಗೀರ್ ಸಾಬ್, ಮುಕುಂದಪ್ಪ, ಮುನಿಸ್ವಾಮಿ, ರಂಗಸ್ವಾಮಿ, ರುದ್ರವ್ವ, ಗಿರೀಶ್ ಸೇರಿದಂತೆ ಅನೇಕ ರೈತಮುಖಂಡರು ಉಪಸ್ಥಿತರಿದ್ದರು.
