
ಬೆಂಗಳೂರು :
ಹಿರಿಯೂರು ಕ್ಷೇತ್ರದ ಮಾಜಿ ಶಾಸಕರು ಹಾಗೂ ಸಚಿವರಾಗಿದ್ದ ದಿ.ಡಿ.ಸುಧಾಕರ್ ರವರು ತಾಲೂಕಿನ ರೈತರ ಹಿತಕ್ಕಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ 64 ಕೆರೆಗಳಿಗೆ ನೀರು ತುಂಬಿಸುವುದು ಹಾಗೂ 37,131 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ₹1,447 ಕೋಟಿ ವೆಚ್ಚದ ನಾಲ್ಕು ಬ್ಲಾಕ್‌ಗಳ ಕಾಮಗಾರಿಗಳ ಅನುಷ್ಠಾನಗೊಳಿಸಲು ನಿರಂತರವಾಗಿ ಶ್ರಮಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಅವರ ಕನಸು ಅರ್ಧದಲ್ಲಿಯೇ ನಿಲ್ಲಬಾರದು ಎಂಬುದಾಗಿ ಸುಹಾಸ್ ಸುಧಾಕರ್ ಹೇಳಿದರು.
ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿ ಹಿರಿಯೂರು ತಾಲೂಕಿನ ಕೆರೆಗಳನ್ನು ತುಂಬಿಸುವುದರ ಜೊತೆಗೆ, ಬಾಕಿ ಉಳಿದಿರುವ ಹನಿ ನೀರಾವರಿ ಕಾಮಗಾರಿಗಳಿಗೆ ತಕ್ಷಣ ಚಾಲನೆ ನೀಡಿ ಪೂರ್ಣಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ನಮ್ಮ ತಂದೆಯವರಾದ ಡಿ.ಸುಧಾಕರ್ ರವರು ಪ್ರಾರಂಭಿಸಿದ ಜನಪರ ಕಾರ್ಯವನ್ನು ಪೂರ್ಣಗೊಳಿಸುವುದು ನನ್ನ ಆದ್ಯ ಕರ್ತವ್ಯ. ಹಿರಿಯೂರಿನ ರೈತರ ಜಮೀನುಗಳಿಗೆ ನೀರು ತಲುಪುವವರೆಗೂ ನನ್ನ ಪ್ರಯತ್ನ ಮತ್ತು ಹೋರಾಟ ನಿರಂತರವಾಗಿರುತ್ತದೆ ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
