
ಹಿರಿಯೂರು :
ತಾಲ್ಲೂಕಿನ ರೈತರು ಫ್ರೇಮ್ ವರ್ಕ್ ಫಾರ್ ಫರ್ಟಿ ಲೈಸರ್ ಸೇಲ್ ತಂತ್ರಾಂಶದ ಮೂಲಕ ರಸಗೊಬ್ಬರವನ್ನು ಖರೀದಿ ಮಾಡುವುದರಿಂದ ತಮ್ಮ ಸಮಯವನ್ನು ಮತ್ತು ಹಣವನ್ನು ಸಮಯೋಜಿತವಾಗಿ ಉಳಿಸಬಹುದಾಗಿದೆ ಎಂಬುದಾಗಿ ತಾಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರ್ಮ್ ನಲ್ಲಿ ತಾಲೂಕು ಕೃಷಿ ಇಲಾಖೆ ಮತ್ತು ಬಬ್ಬೂರು ಫಾರ್ಮ್ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತ ಹಾಗೂ ರೈತ ಮಹಿಳೆಯರಿಗೆ ಫ್ರೇಮ್ ವರ್ಕ್ ಫಾರ್ ಫರ್ಟಿ ಲೈಸರ್ ಸೇಲ್ ತಂತ್ರಾಂಶ ಆಧಾರಿತ ರಸಗೊಬ್ಬರ ಖರೀದಿ ಬಗ್ಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಳ್ಳಕೆರೆ ವಿಭಾಗದ ಉಪ ಕೃಷಿ ನಿರ್ದೇಶಕ ಉಮೇಶ್ ಮಾತನಾಡಿ, ಪ್ರೇಮ್ ವರ್ಕ್ ಫಾರ್ ಫರ್ಟಿ ಲೈಸರ್ ಸೇಲ್ ಆ್ಯಪ್ ಬಳಸುವುದರಿಂದ ರೈತರು ರಸಗೊಬ್ಬರ ಮಳಿಗೆಗಳನ್ನು ಅಲೆದು ರಸಗೊಬ್ಬರ ಖರೀದಿ ಮಾಡುವ ತೊಂದರೆ ತಪ್ಪಿ, ರಸಗೊಬ್ಬರಗಳನ್ನು ನಿಗದಿತ ಧರಕ್ಕೆ ಪಡೆಯಲು ಸಹಾಯವಾಗುತ್ತದೆ ಎಂಬುದಾಗಿ ಹೇಳಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮಾತನಾಡಿ, ರೈತರು ಪ್ರೇಮ್ ವರ್ಕ್ ಫಾರ್ ಫರ್ಟಿ ಲೈಸರ್ ಸೇಲ್ ಆ್ಯಪ್ ಬಳಕೆ ಮಾಡಬೇಕು, ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಗುಣಮಟ್ಟದ ಬೆಳೆಗಳನ್ನು ಬೆಳೆಯುವಂತ ಆಸಕ್ತಿ ತೋರಬೇಕಿದೆ ಎಂಬುದಾಗಿ ಹೇಳಿದರು.
ಬೆಂಗಳೂರು ಪ್ರಾದೇಶಿಕ ಸಮಗ್ರ ಕೀಟ ನಿರ್ವಹಣಾ ಕೇಂದ್ರದ ಡಾ.ಜಯಸಿಂಹ ಮಾತನಾಡಿ, ಖೇತ್ ಬಚಾವೋ ಅಭಿಯಾನವು ದೇಶಾದ್ಯಂತ ಮಣ್ಣಿನ ಆರೋಗ್ಯ ಸುಸ್ತುತಿ ಕೃಷಿ ಹಾಗೂ ವೈಜ್ಞಾನಿಕ ಬೆಳೆ ನಿರ್ವಹಣೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಈ ಅಭಿಯಾನದ ಅಂಗವಾಗಿ ರೈತರಿಗೆ ಸುರಕ್ಷಿತ ಬೆಳೆ ಸಂರಕ್ಷಣೆ, ಗುಣಮಟ್ಟದ ಕೃಷಿ ಉತ್ಪಾದನೆ ಮತ್ತು ಪರಿಸರ ಸ್ನೇಹಿ ಪದ್ದತಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರಲ್ಲದೆ,
ಬೀಜೋಪಚಾರವು ಬೆಳೆಗಳ ಆರಂಭಿಕ ಹಂತದಲ್ಲಿ ರೋಗಗಳು ಮತ್ತು ಕೀಟಗಳ ಹಾವಳಿಯನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನವಾಗಿದ್ದು, ಈ ವಿಧಾನವು ಉತ್ತಮ ಮೊಳಕೆ, ಆರೋಗ್ಯಕರ ಸಸಿ ಬೆಳವಣಿಗೆಗೆ ಹಾಗೂ ಹೆಚ್ಚಿನ ಇಳುವರಿಯನ್ನು ಪಡೆಯಲು ಸಹಾಯವಾಗುತ್ತದೆ ಎಂಬುದಾಗಿ ರೈತರಿಗೆ ವಿವರಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ರವರು ಎಫ್ ಎಫ್ ಎಸ್ ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಖರೀದಿ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಓ.ಶಿವಕುಮಾರ್, ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಗಡಾರಿ ಕೃಷ್ಣಪ್ಪ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಜಗದೀಶ್ ಕಂದಿಕೆರೆ, ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಹರ್ಷ, ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನಿಕಾಂತ್, ಭವ್ಯ, ಸಹನ, ರಶ್ಮಿ, ಹಾಗು ಕೃಷಿ ಸಖಿಯರು, ಪಶುಸಖಿಯರು, ಕೃಷಿ ಅಧಿಕಾರಿಗಳು ಹಾಜರಿದ್ದರು.
