
ಹಿರಿಯೂರು :
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ, ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ಅವಕಾಶಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಂತಹ ಯಾವುದೇ ಮಾಧ್ಯಮಗಳ ವ್ಯಾಮೋಹಕ್ಕೆ ಒಳಗಾಗದೇ ಒಂದು ವೇಳಾಪಟ್ಟಿಯನ್ನು ಸಿದ್ಧಮಾಡಿಕೊಂಡು, ಸಮಯವ್ಯರ್ಥ ಮಾಡದೇ ಸತತ ಪರಿಶ್ರಮದಿಂದ ಓದುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಹೆತ್ತ ತಂದೆ-ತಾಯಿಗಳಿಗೆ ಹಾಗೂ ಓದಿದ ಶಾಲೆಗೆ ಕೀರ್ತಿಯನ್ನು ತರಬೇಕು ಎಂಬುದಾಗಿ ಹೇಳಿದರು.
ಉಪನ್ಯಾಸಕಿ ಶ್ರೀಮತಿ ಗಂಗಮ್ಮ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬದಂತೆ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿ, ಪರೀಕ್ಷೆಯ ಬಗ್ಗೆ ಭಯ ಬೇಡ, ಭಯವನ್ನು ಬಿಟ್ಟು ದೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂಬುದಾಗಿ ಹೇಳಿದರು.

ಉಪನ್ಯಾಸಕರಾದ ಉಮೇಶ್ ಯಾದವ್ ಮಾತನಾಡಿ, ಸತತ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಇರುವ ಕಡಿಮೆ ಸಮಯವನ್ನು ವ್ಯರ್ಥ ಮಾಡದೇ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ವಿಷಯಗಳಲ್ಲಿ ಬರುವ ಮುಖ್ಯಾಂಶಗಳನ್ನು ಮನನ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಾಗಬೇಕು, ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಓದಿಕೊಂಡು ಸರಿಯಾದ ಪ್ರಶ್ನೆಗೆ ಸರಿಯಾದ ುತ್ತರ ಬರೆದು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಕೋ-ಆರ್ಡಿನೇಟರ್ ಶ್ರೀಮತಿ ರಚನ, ಶಿಕ್ಷಕಿಯರುಗಳಾದ ರಜಿಯಾಬೇಗಂ, ರಂಜಿತಾ, ಸಬೀಹಾ, ಮುಬೀನಾ, ಸಾಧಿಕಾ, ಮಮತಾ, ಅಕ್ಷಿತಾ, ಶ್ರೀಮತಿ ನಂದಿನಿ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಜೈಸುಧಾ, ಸುಲೋಚನಾ, ಪೂಜಾ, ಕಾವ್ಯ, ಶಿಕ್ಷಕರಾದ ಉಮೇಶ್ ಯಾದವ್, ಶಿವರಾಜ್, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
