
ಹಿರಿಯೂರು :
ನಾನು ಬಿಜೆಪಿ ಮಂಡಲ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಈ ಚುನಾವಣೆಯಲ್ಲೇ ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಅವರನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿರುವುದು ಸಂತಸದ ವಿಷಯವಾಗಿದೆ ಎಂಬುದಾಗಿ ಬಿಜೆಪಿ ಹಿರಿಯೂರು ಮಂಡಲದ ಅಧ್ಯಕ್ಷರಾದ ಕೆ.ಅಭಿನಂದನ್ ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ಗಾಂಧಿ ವೃತ್ತದಲ್ಲಿ ಆಗ್ನೇಯ ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಜಯಗಳಿಸಿದ ಎನ್ಡಿಎ ಅಭ್ಯರ್ಥಿ ಶ್ರೀ ಕೆ.ಎಂ.ಸುರೇಶ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಜನತಾ ದಳ (ಜಾತ್ಯತೀತ) (ಜೆಡಿಎಸ್) ಪಕ್ಷಗಳ ಹಿರಿಯೂರು ತಾಲೂಕು ಘಟಕಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪ್ರತಿಯೊಬ್ಬ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮತದಾರ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೇ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯೊಂದಿಗೆ ಮುಂಬರುವ ಹಿರಿಯೂರು ವಿಧಾನಸಭಾ ಉಪಚುನಾವಣೆಯಲ್ಲಿಯೂ ಎನ್.ಡಿ.ಎ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂಬುದಾಗಿ ಕರೆ ನೀಡಿದರು.
ಜೆಡಿಎಸ್ ಹಿರಿಯೂರು ತಾಲೂಕು ಅಧ್ಯಕ್ಷರಾದ ಶಂಕರಮೂರ್ತಿ ಅವರು ಮಾತನಾಡಿ, ಕೆ.ಎಂ.ಸುರೇಶ್ ಅವರ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದರಲ್ಲದೆ,

ನಮ್ಮಲ್ಲಿ ಯಾವುದೇ ಭೇದಭಾವ ಅಥವಾ ತಾರತಮ್ಯವಿಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ. ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮುಂಬರುವ ಚುನಾವಣೆಗಳಲ್ಲಿಯೂ ಗೆಲುವು ಸಾಧಿಸಲು ಶ್ರಮಿಸುತ್ತೇವೆ. ಈ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಎರಡೂ ಪಕ್ಷಗಳ ಕಾರ್ಯಕರ್ತರ ಒಗ್ಗಟ್ಟು, ಸಂಘಟಿತ ಪರಿಶ್ರಮ ಹಾಗೂ ಮತದಾರರ ಬೆಂಬಲದಿಂದ ಎನ್.ಡಿಎ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಮುಖಂಡರು ಹರ್ಷ ವ್ಯಕ್ತಪಡಿಸಿದರು.

ನಾಲ್ಕು ಕ್ಷೇತ್ರಗಳಲ್ಲಿ ಎನ್.ಡಿಎ ಅಭ್ಯರ್ಥಿಗಳು ಜಯಗಳಿಸಿರುವುದು ಮೈತ್ರಿಕೂಟಕ್ಕೆ ಮಹತ್ವದ ಬಲ ನೀಡಿದ್ದು, ಇದು ಐತಿಹಾಸಿಕ ಗೆಲುವಾಗಿದೆ ಎಂದು ತಿಳಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತದ ಕುರಿತು ಮತದಾರರು ತಮ್ಮ ತೀರ್ಪಿನ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂಬುದಾಗಿ ಮುಖಂಡರು ಅಭಿಪ್ರಾಯಪಟ್ಟರು. ಎನ್.ಡಿಎ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯನ್ನು ಗೆಲ್ಲಿಸಿದ ಹಿರಿಯೂರು ತಾಲೂಕಿನ ಸಮಸ್ತ ಪದವೀಧರ ಮತದಾರರಿಗೆ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಈ ಗೆಲುವಿನ ಸಂಭ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶಂಕರಮೂರ್ತಿ, ಬಿಜೆಪಿ ಹಿರಿಯೂರು ಮಂಡಲದ ಅಧ್ಯಕ್ಷರಾದ ಕೆ.ಅಭಿನಂದನ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಂಜುನಾಥ್, ಎನ್.ಡಿ.ಎ ಮುಖಂಡರಾದ ಜಯಣ್ಣ, ರವೀಂದ್ರಪ್ಪ, ಡಿ.ಯಶೋಧರ್, ಚಿದಾನಂದ್, ಶಿವಣ್ಣ, ಹನುಮಂತರಾಯ, ನಾಗರಾಜ್, ಜಲ್ದಪ್ಪ, ನಿತಿನ್ ಗೌಡ, ಕೇಶವಮೂರ್ತಿ, ರಾಘಣ್ಣ, ಕೆ.ಟಿ.ಹನುಮಂತ, ರಾಕೇಶ್, ಮುರಳೀಧರ್, ಪ್ರಜ್ವಲ್, ಗೋವಿಂದಪ್ಪ, ಪರಮೇಶ್, ಚರಣ್, ಬಸವರಾಜ್, ದೇವರಾಜ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಅಪಾರಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
