
ಹಿರಿಯೂರು :
ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಬಾರದು, ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯಲು ಪ್ರತಿದಿನವೂ ಹೋರಾಡಬೇಕು, ಈ ನಿಟ್ಟಿನಲ್ಲಿ ಮಹಿಳೆಯರು ಶಿಕ್ಷಣವಂತರಾಗಿ, ಜೀವನದಲ್ಲಿ ಧೈರ್ಯ, ದೃಢಸಂಕಲ್ಪಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದಾಗಿ ಪಟ್ಟನಾಯಕನಹಳ್ಳಿ ಶ್ರೀಮಠದ ಶ್ರೀನಂಜಾವಧೂತ ಸ್ವಾಮೀಜಿಗಳು ಹೇಳಿದರು.
ನಗರದ ತಾಲ್ಲೂಕು ಒಕ್ಕಲಿಗರ ಸಂಘದ ಕಟ್ಟಡದ ಸಭಾಂಗಣದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಉನ್ನತಸ್ಥಾನ ನೀಡಲಾಗಿದ್ದು, ನಮ್ಮ ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಶಿಕ್ಷಣವಂತರಾಗುವ ಮೂಲಕ ಶಿಕ್ಷಣ, ಉದ್ಯೋಗ, ರಾಜಕೀಯ ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾದ ಅವಕಾಶಗಳನ್ನು ಪಡೆದು, ಸಶಕ್ತ ಸಮಾಜದ ನಿರ್ಮಾಣಕ್ಕೆ ದಿಟ್ಟಹೆಜ್ಜೆಯನ್ನು ಇಡಬೇಕು ಎಂಬುದಾಗಿ ಹೇಳಿದರು.

ನಗರಸ ಸ್ತ್ರೀರೋಗ ತಜ್ಞೆ ಡಾ.ಲತಾರಾಮಚಂದ್ರಪ್ಪ ಮಾತನಾಡಿ, ಸಮಾಜದ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳಬೇಕಲ್ಲದೆ, ಸಮಾಜದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆ, ಅನ್ಯಾಯ ದೌರ್ಜನ್ಯ ನಿಯಂತ್ರಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು, ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ಹಾಗೂ ಸಮಾಜದ ಪ್ರತಿಯೊಬ್ಬ ನಾಗರೀಕರೂ ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಬೇಕು ಎಂಬುದಾಗಿ ಹೇಳಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪ ಮಾತನಾಡಿ, ಮಹಿಳಾ ದಿನಾಚರಣೆಯು ಪ್ರತಿ ಮಹಿಳೆಯ ಶಕ್ತಿ, ಧೈರ್ಯ, ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸಂಭ್ರಮಿಸುವ ದಿನವಾಗಿದ್ದು, ಪ್ರತಿಯೊಬ್ಬ ಮಹಿಳೆ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ ಪುರುಷರ ಬದುಕಿನ ಪ್ರತಿ ಹಂತದಲ್ಲೂ ಪ್ರಮುಖಪಾತ್ರವನ್ನು ವಹಿಸುವ ಮಹಿಳೆಯರು ನಮ್ಮ ಸಮಾಜದ ಕಣ್ಣುಗಳು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಡಾ.ಲತಾರಾಮಚಂದ್ರಪ್ಪ, ಡಾ.ಚಂದ್ರಕಲಾ, ಡಾ.ರಕ್ಷಿತಾರೋಹಿತ್, ಡಾ.ವಾಸಂತಿ, ಡಾ.ಅನಿತಾ, ಡಾ.ರೇವತಿ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಮಹಿಳಾ ಘಟಕದ ಅಧ್ಯಕ್ಷೆ ಮಮತಾಕೃಷ್ಣಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಮಶ್ರೀನಿವಾಸ್, ಮಾನಸಮಂಜುನಾಥ್ ಗೌಡ, ಜ್ಞಾನೇಶ್ವರಿತಿಪ್ಪೇಸ್ವಾಮಿ, ತೇಜಸ್ವಿನಿಸುಬ್ರಮಣಿ, ಗೀತಾಆಲೂರು, ಕಲಾವತಿಆಲೂರು, ಚಂದ್ರಕಲಾಆಲೂರು, ಛಾಯಾ, ಕುಸುಮಪ್ರಸಾದ್, ಬೃಂದ, ಅರುಣ, ಜ್ಞಾನದೇವಿ, ಕಲ್ಪನಾಶೇಖರ್, ರಂಗಮ್ಮ, ವೇದಶಿವಕುಮಾರ್, ಸೌಭಾಗ್ಯ, ವನಿತಾ, ಉಮಾಹನುಮಂತರಾಯಪ್ಪ, ವನಿತಾಮಂಜುನಾಥ್, ಹೇಮಲತಾವಸಂತಾ, ರಮ್ಯಾರಾಜು, ರೈತಮುಖಂಡ ಕೆ.ಸಿ.ಹೊರಕೇರಪ್ಪ, ಹಿರಿಯ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಚಿಗಳಿಕಟ್ಟೆ ಕಾಂತರಾಜ್, ಜೆಡಿಎಸ್ ಅಧ್ಯಕ್ಷ ಶಂಕರ್ ಮೂರ್ತಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
