
ಹಿರಿಯೂರು :
ಏಕ ಬಳಕೆ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿಯಾಗುವ ಜೊತೆಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಗರ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸುವುದು ಹಾಗೂ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಹೇಳಿದರು.
ನಗರದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ, ಎಲ್ಲಾ ಅಂಗಡಿಗಳ ವರ್ತಕರೊಂದಿಗೆ ಚರ್ಚೆ ನಡೆಸಿ, ನಂತರ ಅವರು ಮಾತನಾಡಿದರು.
ಅಲ್ಲದೆ ನಗರದ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ನಗರ ವ್ಯಾಪ್ತಿಯಲ್ಲಿನ ಅಂಗಡಿಗಳ ವರ್ತಕರು ಹಾಗೂ ಗ್ರಾಹಕರು ಏಕ ಬಳಕೆ ಪ್ಲಾಸ್ಟಿಕನ್ನು ಸಂಪೂರ್ಣವಾಗಿ ಬಂದ್ ಮಾಡಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸಿಂ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಜಯಣ್ಣ, ರೋಟರಿ ಕ್ಲಬ್ ಅಧ್ಯಕ್ಷರಾದ ವಸಂತ ಕುಮಾರ್, ಆರೋಗ್ಯ ನಿರೀಕ್ಷಕರುಗಳಾದ ಸುನಿಲ್ ಕುಮಾರ್, ಮಹಾಲಿಂಗರಾಜು, ಅಶೋಕ್ ಕುಮಾರ್ ಹಾಗೂ ದಫೇದಾರರುಗಳು ಉಪಸ್ಥಿತರಿದ್ದರು.
