
ಹಿರಿಯೂರು :
ಭಂಡಾರದ ಒಡೆಯ ಎಂದೇ ಭಕ್ತರ ಮನದಲ್ಲಿ ನೆಲೆ ನಿಂತಿರುವ ನಗರದ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಸರಪಳಿ ಪವಾಡ ಉತ್ಸವ ಅಕ್ಟೋಬರ್ 22 ರಂದು ಸಂಜೆ 4 ಗಂಟೆಯಿಂದ ಆರಂಭವಾಗಲಿದೆ ಎಂಬುದಾಗಿ ಧರ್ಮಾದಾಯ ದತ್ತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಂದು ಸ್ವಾಮಿಯನ್ನು ತೇರುಮಲ್ಲೇಶ್ವರ ದೇವಾಲಯಕ್ಕೆ ಕರೆದೊಯ್ದು ಅಲ್ಲಿಂದ ಅಂಬಿನೋತ್ಸವ ನಡೆಸಲಾಗುತ್ತದೆ, ಬಳಿಕ ಸ್ವಾಮಿಯ ದೇವಾಲಯದಲ್ಲಿ ತಂಗಿ ಮರುದಿನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಭಕ್ತರ ಮನೆಗಳಲ್ಲಿ ಹಣ್ಣು ತುಪ್ಪದ ಮಣೇವು ಕಾರ್ಯಕ್ರಮ ನಡೆಯುತ್ತದೆ, ಸಂಜೆ ದೇವಾಲಯದ ಮುಂಭಾಗದಲ್ಲಿ ಇರುವ ಕಲ್ಲು ಕಂಬಕ್ಕೆ ಕಟ್ಟಿದ ಸರಪಳಿಯನ್ನು ಉಪವಾಸ ನಿರತ ಗೊರವಯ್ಯನವರು ಎಳೆದು ತುಂಡರಿಸುವ ಪವಾಡ ನಡೆಯಲಿದೆ.

ಸರಪಳಿ ಅರ್ಧಕ್ಕೆ ತುಂಡಾದರೆ ಬರುವ ದಿನಗಳಲ್ಲಿ ದೇಶದಲ್ಲಿ ಉತ್ತಮ ಮಳೆ, ಸಮೃದ್ಧ ಬೆಳೆ ಆಗುತ್ತದೆ ಕಲ್ಲುಗೂಟಕ್ಕೆ ಸಮೀಪ ತುಂಡಾದರೆ ಮಳೆ ಬೆಳೆ ಕಷ್ಟ ಎನ್ನುವುದು ಭಕ್ತರ ನಂಬಿಕೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನಡೆಯುವ ಕಾರಣೀಕಕ್ಕೂ ಹಿರಿಯೂರಿನ ಮೈಲಾರ ದೇವರ ಸರಪಳಿ ಪವಾಡದಲ್ಲಿ ಬರುವ ಸೂಚನೆಗೂ ಸಾಮ್ಯತೆ ಇರುತ್ತದೆ ಎಂಬುದು ಜನರ ನಂಬಿಕೆ.
ನವರಾತ್ರಿಯ 9 ದಿನ ಸರಪಳಿಗೆ ಬಲಿಪೂಜೆ, ಹೋಮ, ಗಂಗಾಪೂಜೆ ನಡೆಸಲಾಗುವುದು, ಆಯುಧಪೂಜೆ ದಿನ ಕುದುರೆಪೂಜೆ ನಡೆಸಿ, ನವರಾತ್ರಿ ದಿನ ಮೈಲಾರ ದೇವರ ಉತ್ಸವ ಮೂರ್ತಿಯನ್ನು 7 ಅಡಿ ಎತ್ತರದ ಬೃಹತ್ ಗಾತ್ರದ ಕುದುರೆ ಮೇಲೆ ಪ್ರತಿಷ್ಠಾಪಿಸಿ ಅಂಬಿನೋತ್ಸವಕ್ಕೆ ಕರೆದೊಯ್ಯಲಾಗುತ್ತದೆ ಮರುದಿನ ಸಂಜೆ 4ಗಂಟೆಯಿಂದ ಸರಪಳಿ ಪವಾಡ ಆರಂಭವಾಗುತ್ತದೆ, ಪವಾಡದ ನಂತರ ತೀರ್ಥ ಪ್ರಸಾದದ ವಿನಿಯೋಗವಿರುತ್ತದೆ.
