
ಹಿರಿಯೂರು :
ನಗರದ ಬೆಸ್ಕಾಂ ಕಛೇರಿ ಮುಂದೆ ರೈತರ ಪಂಪ್ ಸೆಟ್ ಗಳಿಗೆ ನಿತ್ಯ 7ಗಂಟೆಗಳು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಸ್ಥಳೀಯ ರೈತ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 4 ಗಂಟೆ ಹಾಗೂ ಸಂಜೆ 3ಗಂಟೆ ವಿದ್ಯುತ್ ಸರಬರಾಜು ಮಾಡಬೇಕೆಂದು ಸರ್ಕಾರದ ಆದೇಶವಿದ್ದರೂ ಬೆಸ್ಕಾಂ ಇಲಾಖೆ ಕೇವಲ ಮೂರರಿಂದ ನಾಲ್ಕು ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿರುವುದು ನಿಜಕ್ಕೂ ಬೇಸರ ತಂದಿದೆ,

ಅಲ್ಲದೆ ಬಹಳಷ್ಟು ಸಂದರ್ಭದಲ್ಲಿ ವೋಲ್ಟೇಜ್ ಇಲ್ಲದ ಕಾರಣ ಪಂಪ್ ಸೆಟ್ ಗಳು ಚಾಲು ಆಗುವುದಿಲ್ಲ, ವೋಲ್ಟೇಜ್ ಸಮಸ್ಯೆಯಿಂದ ಪದೇಪದೇ ಮೋಟಾರಗಳು ಸುಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದು ದುಸ್ತರವಾಗಿದೆ ಎಂಬುದಾಗಿ ಮುಖಂಡರು ಆರೋಪಿಸಿದರು.
ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಹಿರಿಯೂರು ತಾಲೂಕುಗಳಲ್ಲಿ ಬರಕಾಣಿಸಿಕೊಂಡಿದೆ, ಕೊಳವೆಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರು ಬಳಸಿಕೊಂಡು ಬೆಳೆಗಳನ್ನು ಉಳಿಸಿಕೊಳ್ಳಬೇಕಿದೆ, ಮಳೆಯಂತೆ ವಿದ್ಯುತ್ ಕಣ್ಣ ಮುಚ್ಚಾಲೆ ಆಡಿದರೆ ರೈತರು ಉಳಿಯುವುದು ಹೇಗೆ ಎಂದು ಬೆಸ್ಕಾಂ ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಎಂಡಿಗಾರ್ ರವರು ರೈತರ ಕಷ್ಟದ ಅರಿವು ನಮಗಿದೆ ಮಳೆ ಕಡಿಮೆ ಆಗಿರುವ ಕಾರಣಕ್ಕೆ ವಿದ್ಯುತ್ ಗೆ ಬೇಡಿಕೆ ಹೆಚ್ಚಿದೆ ರೈತರಿಗೆ ತೊಂದರೆ ಆಗದಂತೆ ನಿಯಮಾನುಸಾರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂಬುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದೆ ಪಡೆದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರೆಡ್ಡಿಹಳ್ಳಿ ಈರಣ್ಣ, ಕೆ.ಟಿ.ತಿಪ್ಪೇಸ್ವಾಮಿ, ಬಳಗಟ್ಟ ವೆಂಕಟೇಶ್, ಸಣ್ಣತಿಮ್ಮಣ್ಣ, ಜಯಣ್ಣ, ಚಳ್ಳಕೆರೆ ರಾಜಣ್ಣ, ಶ್ರೀಕಂಠಮೂರ್ತಿ, ತಿಪ್ಪೇಸ್ವಾಮಿ, ಚೆನ್ನಕೇಶವ, ರಂಗಸ್ವಾಮಿ, ರಂಗನಾಥ್, ಸುರೇಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
