
ಹಿರಿಯೂರು :
ವಾಣಿವಿಲಾಸ ಸಾಗರದಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಈಗಾಗಲೇ ಹಂಚಿಕೆಯಾಗಿರುವ ನೀರಿನ ಪ್ರಮಾಣ ಸುಮಾರು ಹತ್ತು ಟಿಎಂಸಿ ಆಗಿದ್ದು,ಆದ್ದರಿಂದ ಭದ್ರಾಜಲಾಶಯದಿಂದ ಪ್ರತಿವರ್ಷ ವಾಣಿವಿಲಾಸಸಾಗರಕ್ಕೆ 10ಟಿಎಂಸಿ ನೀರು ಹರಿಸಬೇಕು, ಇಲ್ಲವಾದಲ್ಲಿ ವಾಣಿವಿಲಾಸಸಾಗರ ರಕ್ಷಣೆಗಾಗಿ ಹಿರಿಯೂರು ವಿಧಾನಸಭೆ ಉಪಚುನಾವಣೆ ಬಹಿಷ್ಕರಿಸಲಾಗುವುದು ಎಂಬುದಾಗಿ ವಾಣಿವಿಲಾಸಸಾಗರ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ಎಚ್ಚರಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಸಭೆ ಸೇರಿದ್ದ ಸಮಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಧ್ಯ ಕರ್ನಾಟಕದ ಜಲಪಾತ್ರೆಯಾಗಿರುವ ವಿವಿಸಾಗರಕ್ಕೆ ಅಷ್ಟದಿಕ್ಕುಗಳಿಂದಲೂ ಸಂಕಷ್ಟ ಎದುರಾಗುತ್ತಿದೆ, ಈ ಸಮಸ್ಯೆಗೆ ಪರಿಹಾರ ಎಂದರೆ ಸರ್ಕಾರ ತುಂಗಾದಿಂದ ಭದ್ರಾಜಲಾಶಯಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು, ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ಪ್ರತಿವರ್ಷ 10 ಟಿಎಂಸಿ ನೀರು ಹರಿಸಬೇಕು ಎಂದರಲ್ಲದೆ,
ತುಮಕೂರು ಜಿಲ್ಲೆ ಶಿರ ತಾಲೂಕಿನಿಂದ ಕೈಗಾರಿಕೆಗಳಿಗೆ ನೀರನ್ನು ಹಂಚಿಕೆ ಮಾಡಿಸಲು ಪ್ರಯತ್ನ ಪಡುತ್ತಿರುವ ಶಿರಾಶಾಸಕರಾದ ಟಿಬಿ ಜಯಚಂದ್ರ ಅವರ ನಡೆಯ ಬಗ್ಗೆ ಚರ್ಚಿಸಿ ಅದನ್ನು ನಿಲ್ಲಿಸಲು ಸರ್ವಪಕ್ಷ, ಸರ್ವ ಸಂಘ-ಸಂಸ್ಥೆಗಳು, ರೈತರು ,ನಾಗರಿಕರು, ವರ್ತಕರು ,ವಿವಿಧ ವೃತ್ತಿ ನಿರತ ಜನರನ್ನು ಸೇರಿಸಿಕೊಂಡು ಜಿಲ್ಲೆಯ ಎಲ್ಲ ಎಂಎಲ್.ಎ ಎಂಎಸ್.ಸಿ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಒಳಗೊಂಡಂತೆ ಎಲ್ಲರನ್ನು ಸೇರಿಸಿ ವಿವಿಸಾಗರ ರಕ್ಷಿಸಲು ಹಕ್ಕೋತಾಯ ಮಂಡಿಸಲಾಗುವುದು.
ಹಾಗೊಂದು ವೇಳೆ ವಿವಿಸಾಗರದಿಂದ ಶಾಸಕ ಟಿಬಿ ಜಯಚಂದ್ರ ನೀರು ತೆಗೆದುಕೊಂಡು ಹೋಗಲು ಸರ್ಕಾರದಿಂದ ಆದೇಶ ಮಾಡಿಸಿದರೆ ಬರಲಿರುವ ಹಿರಿಯೂರು ವಿಧಾನಸಭೆ ಉಪಚುನಾವಣೆಯನ್ನು ಬಹಿಷ್ಕರಿಸಲು ಕರೆ ನೀಡಲಾಗುವುದು. ತಾಲೂಕಿನ ಎಲ್ಲ ಪಕ್ಷಗಳ ,ಸಂಘ ಸಂಸ್ಥೆಗಳ ಪ್ರಮುಖರ ಸಭೆಯನ್ನು ಮುಂದಿನ ವಾರ. ಸೆಪ್ಟೆಂಬರ್ 8ನೇ ತಾರೀಕು ಮಂಗಳವಾರ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಭೆಗೆ ಈ ಭಾಗದ ರೈತ ಬಾಂಧವರು ತಪ್ಪದೇ ಬರಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಎಚ್.ಆರ್. ತಿಮ್ಮಯ್ಯ, ಖಜಾಂಚಿ ಬಬ್ಬೂರು ಸುರೇಶ್ ,ಸಂಚಾಲಕ ಎಸ್.ಬಿ.ಶಿವಕುಮಾರ್ ಇನ್ನಿತರರು ಅಮೂಲ್ಯ ಸಲಹೆಗಳನ್ನು ನೀಡಿದರು.
ಈ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಮಾಳಿಗೆ, ಗ್ರಾಮ ಪಂಚಾಯಿತಿ ಸದಸ್ಯೆ,ಶಶಿಕಲಾ, ಪಿಟ್ಲಾಲಿ ಶ್ರೀನಿವಾಸ್,ನಿವೃತ್ತ ಬ್ಯಾಂಕ್ ಅಧಿಕಾರಿ ಎಂಟಿಬಿ. ನಾಯ್ಕ, ಮಮತಾ ಕೃಷ್ಣಮೂರ್ತಿ, ಜೆ ಬಿ. ರಾಜು,ಆನಂದ ಶೆಟ್ರು, ನಾರಾಯಣಾಚಾರ್, ಆಲೂರುಕಲಾವತಿ, ಗೀತಮ್ಮ ರಾಮಚಂದ್ರ ಕಸವನಹಳ್ಳಿ, ಮಲ್ಲಿಕಾರ್ಜುನಪ್ಪ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
