
ಹಿರಿಯೂರು :
ಶಿರಾ ತಾಲೂಕಿನ ಶಾಸಕರಾದ ಮಾನ್ಯ ಜಯಚಂದ್ರ ಅವರು ವಿವಿ ಸಾಗರದ 1 ಟಿಎಂಸಿ ಅಡಿ ನೀರನ್ನು ಶಿರಾ ತಾಲೂಕಿಗೆ ಹರಿಸುವುದಾಗಿ ಭಾನುವಾರ ಹೇಳಿಕೆ ನೀಡಿರುವುದು ನಿಜಕ್ಕೂ ಖಂಡನೀಯ, ಎಂಬುದಾಗಿ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ಸೇರಿದ್ದ ಸಮಿತಿ ಸದಸ್ಯರ ಜೊತೆ ಚರ್ಚೆ ಮಾಡಿ ಮಾತನಾಡಿದ ಅವರು ಶಿರಾ ತಾಲೂಕಿನ ಶಾಸಕರಾದ ಮಾನ್ಯ ಜಯಚಂದ್ರ ಅವರು ಈ ಹಿಂದೆ 2013ರಲ್ಲಿ ಹಿರಿಯೂರು ತಾಲೂಕಿನ ಮೂಲಕ ಹಾದುಹೋಗಬೇಕಿದ್ದ ಭದ್ರಾಮೇಲ್ದಂಡೆ ಯೋಜನೆಯನ್ನು ಹೊಸದುರ್ಗ ಚಿಕ್ಕನಾಯಕನಹಳ್ಳಿ ಮೂಲಕ ಶಿರಾ ತಾಲೂಕಿಗೆ ನೀರು ತೆಗೆದುಕೊಂಡು ಹೋಗಿ ವಿವಿಸಾಗರಕ್ಕೆ ಮಂಜೂರಾಗಿದ್ದ 5ಟಿಎಂಸಿ ನೀರನ್ನು 2ಟಿಎಂಸಿಗೆ ಇಳಿಸಿದರು.
ಅಲ್ಲದೆ ಗಾಯತ್ರಿ ಜಲಾಶಯದ ಅಚ್ಚುಕಟ್ಟುಪ್ರದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಶಿರಾ ತಾಲೂಕಿಗೆ ಸೇರಿದ್ದರೂ ಇವರ ರಾಜಕೀಯ ಜೀವನದಲ್ಲಿ ಒಂದು ಹನಿ ನೀರನ್ನು ಗಾಯತ್ರಿ ಜಲಾಶಯಕ್ಕೆ ಹರಿಸಲು ಸಾಧ್ಯವಾಗಿಲ್ಲ. ಹೇಮವತಿ ನೀರನ್ನು ಕಳ್ಳಂಬೆಳ್ಳಕ್ಕೆ ಬಿಟ್ಟರೆ ಬೇರೆ ಎಲ್ಲಿಗೂ ಕೊಡಲು ಸಾಧ್ಯವಾಗಿಲ್ಲ ವಾಣಿವಿಲಾಸ ಸಾಗರಕ್ಕೆ ಜೈಚಂದ್ರ ಅವರ ಕೊಡುಗೆಯನ್ನು ವಾಮಮಾರ್ಗದಿಂದ ನೀರನ್ನು ತೆಗೆದುಕೊಂಡು ಹೋಗುವುದಾದರೆ ಅದಕ್ಕೆ ನಮ್ಮ ಧಿಕ್ಕಾರವಿರುತ್ತದೆ
ಇವರಿಗೆ ಶಕ್ತಿ ಸಾಮರ್ಥ್ಯಗಳಿದ್ದರೆ ವಾಣಿವಿಲಾಸ ಸಾಗರಕ್ಕೆ 10ಟಿಎಂಸಿ ನೀರನ್ನು ಮಂಜೂರು ಮಾಡಿಸಿ ತೆಗೆದುಕೊಂಡು ಹೋಗಲಿ ಅದು ಬಿಟ್ಟು ಸಂಧ್ಯಾಕಾಲದಲ್ಲಿ ಎರಡು ತಾಲೂಕುಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ನಿಲ್ಲಿಸಲಿ. ಸುಳ್ಳು ಹೇಳಿ ಮಾತಿನಲ್ಲಿ ಮನೆ ಕಟ್ಟುವುದರಲ್ಲಿ ಜಯಚಂದ್ರ ಅವರು ನಿಸ್ಸೀಮರು. ನಮ್ಮ ವಿರೋಧವನ್ನು ಕೇಳಿದರೆ ಶಿರಾ ತಾಲೂಕಿನಲ್ಲಿರುವ ನಮ್ಮ ಸಂಬಂಧಿಕರು ನಮ್ಮ ಬಗ್ಗೆ ಬೇಸರ ಪಡಬಹುದು.
ಆದರೆ ಒಬ್ಬ ಜನಪ್ರತಿನಿಧಿಯಾಗಿ ಸಮಗ್ರ ನೀರಾವರಿಯ ಕನಸು ಇರಬೇಕೇ ಹೊರತು ಇವರಿಂದ ಎತ್ತಿನಹೊಳೆ ನೀರು ಬರಲಿಲ್ಲ, ಹೇಮಾವತಿ ನೀರು ಎಲ್ಲಾ ಕಡೆ ಹರಿಯಲಿಲ್ಲ, ಭದ್ರಾ ಮೇಲ್ದಂಡೆ ತುಮಕೂರು ಶಾಖಾ ಕಾಲುವೆ ಕಾಮಗಾರಿಯೇ ಆಗಲಿಲ್ಲ. ಇನ್ನು ಮುಂದಾದರೂ ಈಗಾಗಲೇ ಬರದಿಂದ ಕಂಗೆಟ್ಟಿರುವ ಚಿತ್ರದುರ್ಗ ಜನತೆಗೆ ವಿವಿಸಾಗರ ಜಲಾಶಯ ಒಂದೇ ಆಸರೆಯಾಗಿದ್ದು, ನಂಬಿರುವ ಜನರಿಗೆ ದ್ರೋಹಮಾಡುವ ಕೆಲಸಕ್ಕೆ ಹೋಗಬೇಡಿ ಎಂದು ಎಚ್ಚರಿಸಿದರು.
ಸಮಿತಿ ಕಾರ್ಯಾಧ್ಯಕ್ಷರಾದ ಎಚ್.ಆರ್.ತಿಮ್ಮಯ್ಯ ಮಾತನಾಡಿ, ವಿವಿಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಸುವ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಎಂಎಲ್ಎಗಳು, ಎಂಎಲ್ಸಿ ಗಳು ಸಂಸದರು ಹಾಗೂ ಎಲ್ಲಾ ವಿರೋಧ ಪಕ್ಷದ ನಾಯಕರುಗಳು, ಆಡಳಿತ ಪಕ್ಷದವರು, ಸಂಘ-ಸಂಸ್ಥೆಗಳವರು ಇದಕ್ಕಾಗಿ ಧ್ವನಿ ಎತ್ತಬೇಕು ಎಂಬುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಆಲೂರುಸಿದ್ದರಾಮಣ್ಣ, ಪಿಟ್ಲಾಲಿಶ್ರೀನಿವಾಸ್, ಮಂಜುನಾಥ್ ಮಾಳಿಗೆ, ಕೆ.ಜಿ.ಹನುಮಂತರಾಯ, ದಸ್ತಗಿರ್ ಸಾಬ್, ರಾಮಚಂದ್ರ ಕಸವನಹಳ್ಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
