September 12, 2026
03

ಹಿರಿಯೂರು :

ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಈ ವೃತ್ತಿಯನ್ನು ಶ್ರದ್ಧೆ, ಭಕ್ತಿ, ಹಾಗೂ ಅರ್ಪಣಾ ಮನೋಭಾವದಿಂದ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆಯಬೇಕು ಆಗ ಮಾತ್ರ ನಮ್ಮ ವೃತ್ತಿಗೆ ಒಂದು ಸಾರ್ಥಕತೆ ಬರುತ್ತದೆ ಎಂಬುದಾಗಿ ನಿವೃತ್ತ ಶಿಕ್ಷಕ ಆರ್.ಶಿವಶಂಕರ್ ಮಠದ್ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶ್ರೀವಾಗ್ದೇವಿ ಹಿರಿಯ ಪ್ರಾಥಮಿಕ ಶಾಲೆಯ 1995ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಳ್ಳಲಾಗಿದ್ದ ಗುರುನಮನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕ ವೃತ್ತಿಯ ಪವಿತ್ರತೆ ಘನತೆ ಗೌರವವನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬ ಗುರುವಿನ ಕರ್ತವ್ಯವಾಗಿದೆ, ಜಗತ್ತಿನಲ್ಲಿ ಗುರುವಿಗೆ ಭಗವಂತನಷ್ಟೇ ಗೌರವ ಇದೆ, ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಮಾರ್ಗದರ್ಶನ ಅತ್ಯಗತ್ಯ, ಸಂಸ್ಕಾರ ಮೌಲ್ಯ ಹಾಗೂ ಮಾನವೀಯ ಸಂಬಂಧಗಳನ್ನು ತಿಳಿಸುವಂತಹ ಶಿಕ್ಷಣ ಪದ್ಧತಿಯ ಅಗತ್ಯವಿದೆ ಎಂದರಲ್ಲದೆ,

ಹೊಟ್ಟೆಪಾಡಿನ ಶಿಕ್ಷಣದಿಂದ ಸಂಸ್ಕಾರ ಮಾನವೀಯ ಸಂಬಂಧ ಮರೆಯಾಗುತ್ತಿದೆ, ಆಡಂಬರದ ಶಿಕ್ಷಣದ ಪರಿಣಾಮವಾಗಿ ಕೌಟುಂಬಿಕ ಕಲಹಗಳು, ಆತ್ಮಹತ್ಯೆ ಪ್ರಕರಣಗಳು, ವಿವಾಹ ವಿಚ್ಛೇದನಗಳನ್ನು ಕಾಣುತ್ತಿದ್ದೇವೆ, ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಭಾರದಿಂದ ಮಕ್ಕಳ ಕಲಿಕೆಯತ್ತ ಗಮನ ಹರಿಸದಂತಾಗಿದೆ ಎಂಬುದಾಗಿ ವಿಷಾದಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸೌಭಾಗ್ಯಮ್ಮ ಶಾಲೆ ನಡೆದು ಬಂದ ದಾರಿ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರುಗಳಾದ ಶಾರದಮ್ಮ, ವರಲಕ್ಷ್ಮಿ, ಕೋಮಲಮ್ಮ, ವಿಶಾಲಾಕ್ಷಿ, ಶಿವಮ್ಮ, ಗಿರಿಜಾ, ಕಸ್ತೂರಿಬಾಯಿ, ಶೋಭಾ, ರುಕ್ಮಿಣಿ, ಯಶೋದಮ್ಮ, ಅನಿತಾ, ಗೀತಾಲಕ್ಷ್ಮಿ, ಶಿರೀನಾ ಬೇಗಮ್, ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *