
ಹಿರಿಯೂರು :
ತಾಲ್ಲೂಕಿನ ಮಸ್ಕಲ್ ಗ್ರಾಮದ ಗ್ರಾಮದೇವತೆಯಾದ ಶ್ರೀಕರಿಯಮ್ಮದೇವಿಯ ಜಾತ್ರಾ ಮಹೋತ್ಸವವು ಮಂಗಳವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸೋಮವಾರದಂದು ಶ್ರೀಕರಿಯಮ್ಮದೇವಿಗೆ ಗಂಗಾಪೂಜೆ ನೆರವೇರಿಸಿದ ನಂತರ ರಾತ್ರಿ ವಿವಿಧ ಬಗೆಯ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಇಡೀ ಗ್ರಾಮದ ರಸ್ತೆಯುದ್ಧಕ್ಕೂ ವಿವಿಧ ಬಗೆಯ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಮಂಗಳವಾರದಂದು ಕರಿಯಮ್ಮದೇವಿಯ ಮೂರ್ತಿಯನ್ನು ವಿವಿಧ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕರಿಸಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ ಪೂಜೆಯನ್ನು ಮಾಡಲಾಯಿತು.
ಟಿಬಿಗೊಲ್ಲರಹಟ್ಟಿ, ಚಿತ್ರದೇವರಹಟ್ಟಿ, ಮಸ್ಕಲ್, ಮಲ್ಲೇಣು, ದೇವಿ ಕಾಲೋನಿ, ಪುಟ್ಟಯ್ಯನಕಟ್ಟೆ ಗ್ರಾಮಸ್ಥರು ತಂಡೋಪತಂಡವಾಗಿ ಕುಟುಂಬದ ಸದಸ್ಯರೊಂದಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿದರು.ಮಹಿಳೆಯರು ದೇವಿಗೆ ತಂಬಿಟ್ಟಿನ ಆರತಿಯನ್ನು ಬೆಳಗಿದರು.
ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರಗಾಲ ಕಾಣಿಸಿಕೊಂಡಿರುವ ಕಾರಣ ಉತ್ತಮ ಮಳೆ-ಬೆಳೆಯಾಗಿ ತಾಲ್ಲೂಕು ಸಮೃದ್ಧಿಯಾಗಲಿ ಎಂಬುದಾಗಿ ದೇವಸ್ಥಾನ ಸಮಿತಿಯವರು ಶ್ರೀಕರಿಯಮ್ಮದೇವಿಗೆ ವಿವಿಧ ಬಗೆಯಲ್ಲಿ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಲವಾರು ರಾಜಕೀಯ ಗಣ್ಯರು, ರಾಜಕೀಯ ಮುಖಂಡರುಗಳು, ದೇವಸ್ಥಾನ ಸಮಿತಿಯ ಸದಸ್ಯರುಗಳು, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಂತಹ ಸಾವಿರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
