
ಹಿರಿಯೂರು :
ತಾಲೂಕಿನಲ್ಲಿ ರೈತರು ಹೊಲಗಳಲ್ಲಿ ಪಂಪ್ ಸೆಟ್ ಗಳಿಗೆ ಹಾಕಿರುವ ಕೇಬಲ್ ಗಳನ್ನು ಕಳ್ಳರು ರಾತ್ರಿ ವೇಳೆ ಕಟ್ ಮಾಡಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಈಗಾಗಲೇ ವರದಿಯಾಗಿದ್ದು. ಇದೀಗ ಐಮಂಗಳಹೋಬಳಿಯಲ್ಲಿರುವ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕಳ್ಳತನ ಜವಗೊಂಡನಹಳ್ಳಿ ಹೋಬಳಿಯಲ್ಲೂ ಮುಂದುವರೆದಿದೆ ಎಂಬುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಗೌರವಾಧ್ಯಕ್ಷರಾದ ಆಲೂರುಸಿದ್ದರಾಮಣ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈಗ ಕಸಬಾ ಹೋಬಳಿಯ ಆಲೂರು ಗ್ರಾಮದಲ್ಲಿ ಹೀಗೆ ಎರಡು ದಿನಗಳಿಂದ 15-16 ರೈತರ ಹೊಲಗಳಲ್ಲಿ ರಾತ್ರಿ ವೇಳೆ ಕೇಬಲ್ ಗಳನ್ನು ಕಟ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ಕಳ್ಳತನ ಮಾಡುವ ವ್ಯಕ್ತಿಗಳು ಅದೇ ಊರಿನಲ್ಲಿ ಇರುವ ವ್ಯಕ್ತಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ, ಈ ಬಗ್ಗೆ ಕೆಲವು ರೈತರು ಕಳ್ಳತನ ಮಾಡಿರುವ ವ್ಯಕ್ತಿಗಳ ಬಗ್ಗೆ ಸುಳಿವು ಕೊಟ್ಟರು ಸಹ ಯಾವುದೇ ಕ್ರಮ ವಹಿಸುತ್ತಿಲ್ಲ.
ಹೀಗಾಗಿ ಹೆಗ್ಗಿಲ್ಲದೆ ಕಳ್ಳತನ ಮುಂದುವರೆಯುತ್ತಿದೆ, ಅಲ್ಲದೆ ಕೆಲವು ರೈತರು ದೂರ ಕೊಟ್ಟರು ಠಾಣೆಯಲ್ಲಿ ದೂರವನ್ನು ಸ್ವೀಕರಿಸುತ್ತಿಲ್ಲವೆಂದು ಹೇಳುತ್ತಿದ್ದಾರೆ. ಹಿರಿಯೂರು ತಾಲೂಕಿನಲ್ಲಿ ಇದುವರೆಗೂ ಒಂದು ಹದ ಮಳೆಬಾರದೆ ಕುಡಿಯುವ ನೀರಿಗೂ ತೊಂದರೆಯಾಗಿದ್ದು, ರೈತರು ಜೀವನ ಸಾಗಿಸುವುದೇ ಕಷ್ಟವಾಗಿದೆ.
ಹೀಗಿರುವಾಗ ಕಳ್ಳತನವಾಗಿರುವ ಕೇಬಲ್ ಗಳನ್ನು ತರಲು ಹಣ ಹೊಂದಿಸುವುದು ಕಷ್ಟವಾಗುತ್ತಿದೆ. ಈಗಲಾದರೂ ಪೊಲೀಸ್ ಸಿಬ್ಬಂದಿಯವರು ಕಳ್ಳತನ ಮಾಡುತ್ತಿರುವ ವ್ಯಕ್ತಿಗಳನ್ನು ಬಂಧಿಸದಿದ್ದರೆ ರೈತರು ಬರಗಾಲದ ಬವಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ, ದಯಮಾಡಿ ಈ ಬಗ್ಗೆ ಪೋಲೀಸ್ ಇಲಾಖೆ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ.
