
ಬೆಂಗಳೂರು :
ಬಿಡದಿಯ ಟೌನ್ ಶಿಪ್ ವ್ಯಾಪ್ತಿಯಲ್ಲಿ ಎಐಸಿಟಿ ನಿರ್ಮಿಸುವ ಸಂಕಲ್ಪ ತೊಟ್ಟಿರುವ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ದೇಶದಲ್ಲಿಯೇ ಮೊದಲ ಸರ್ಕಾರಿ ಕೃತಕ ಬುದ್ಧಿಮತ್ತೆ [ಎಐ] ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕನಸನ್ನು ಬಿತ್ತಿದ್ದಾರೆ.
ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ “ಗೂಗಲ್ ಐಓ ಕನೆಕ್ಟ್” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಐ ಈಗ ಕಚೇರಿ ಕೆಲಸಗಳಿಗೆ ಸೀಮಿತವಾಗಿಲ್ಲ, ಅದು ನಮ್ಮ ದೈನಂದಿನ ಜೀವನದ ಭಾಗವಾಗಿದೆ ಈ ಕ್ಷೇತ್ರದಲ್ಲಿರುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಯುವಜನರನ್ನು ಸಿದ್ಧಗೊಳಿಸಬೇಕಿದೆ, ಹೀಗಾಗಿ ಬೆಂಗಳೂರಿನಲ್ಲಿ ದೇಶದ ಮೊದಲ ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂಬುದಾಗಿ ಅವರು ಹೇಳಿದರು.
ಕರ್ನಾಟಕವನ್ನು ಎಐ ನೇಟಿವ್ ರಾಜ್ಯವನ್ನಾಗಿ ರೂಪಿಸಬೇಕಿದೆ ಜೊತೆಗೆ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಅಳವಡಿಸಬೇಕಿದೆ, ಇದಕ್ಕಾಗಿ ಎಐ ಕೌಶಲವನ್ನು ವೃದ್ಧಿಸಬೇಕು ಅಲ್ಲದೇ ಈಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ, ಈ ಎಲ್ಲಾ ಗುರಿಗಳನ್ನು ಸಾಧಿಸಲು ಪ್ರತ್ಯೇಕ ವಿಶ್ವವಿದ್ಯಾಲಯ ಒಂದರ ಅಗತ್ಯವಿದೆ ಎಂದು ಅವರು ವಿವರಿಸಿದರು.
ಭಾರತದ ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಕರ್ನಾಟಕದ ಕೊಡುಗೆ ಶೇಕಡ 40ರಷ್ಟಿದೆ, 17000ಕ್ಕೂ ಹೆಚ್ಚು ನವೋದ್ಯಮಗಳಿಗೆ ಬೆಂಗಳೂರು ನೆಲೆಯಾಗಿದೆ, ದೇಶದ ನವೋದ್ಯಮ ರಾಜಧಾನಿಯಾಗಿರುವ ಬೆಂಗಳೂರನ್ನು ಎಐ ರಾಜಧಾನಿಯನ್ನಾಗಿ ರೂಪಿಸಲು ಪಣತೊಟ್ಟಿದ್ದೇವೆ ಎಂಬುದಾಗಿ ಅವರು ಹೇಳಿದರು.
ಕರ್ನಾಟಕ ಮತ್ತು ಬೆಂಗಳೂರಿನ ಈ ಪಯಣದಲ್ಲಿ ಗೂಗಲ್ ಉತ್ತಮ ಪಾಲುದಾರನಾಗಲಿದೆ, ಎಐ ಬಳಸಿಕೊಂಡು ಈ ನಗರದ ಸಂಚಾರ ದಟ್ಟಣೆನಿರ್ವಹಣೆಗೆ ಉಪಯುಕ್ತವಾಗುವ ರೀತಿಯಲ್ಲಿ ಪರಿಹಾರೋಪಾಯಗಳನ್ನು ಹುಡುಕೋಣ ಎಂಬುದಾಗಿ ಮುಖ್ಯಮಂತ್ರಿಗಳು ಸಾರ್ವಜನಿಕರಿಗೆ ಕರೆ ನೀಡಿದರು.
ಎಐ ವಿಶ್ವವಿದ್ಯಾಲಯಕ್ಕಾಗಿ ನೂರು ಎಕರೆ ವಿಸ್ತಾರವಾದ ಕ್ಯಾಂಪಸ್ ನಿರ್ಮಿಸಲಾಗುತ್ತದೆ, ಕಲಬುರ್ಗಿ ಬೆಳಗಾವಿ, ಹುಬ್ಬಳ್ಳಿ, ಮಂಗಳೂರಿನ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗುತ್ತದೆ ಎಂಬುದಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
