
ಹಿರಿಯೂರು :
ನಗರದ ನೆಹರು ಕ್ರೀಡಾಂಗಣದಲ್ಲಿ “ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕ-ಬಾಲಕಿಯರ ಹೊನಲು ಬೆಳಕಿನ ಖೋ-ಖೋ ಅಸೋಸಿಯೇಷನ್ ಕಪ್-2026” ಪಂದ್ಯಾವಳಿ ಇದೇ ಜುಲೈ 17ರಿಂದ 19ರವರೆಗೆ ನಡೆಯಲಿದ್ದು, ಈ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಗೆ ಅಗತ್ಯವಾದ ಸಿದ್ಧತೆಯನ್ನು ನಡೆಸಲಾಗುತ್ತಿದೆ ಎಂಬುದಾಗಿ ಗರುಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷರಾದ ಡಿ.ನಾರಾಯಣರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಕೋಕೋ ಸಂಸ್ಥೆ ಬೆಂಗಳೂರು, ಚಿತ್ರದುರ್ಗ ಜಿಲ್ಲಾ ಖೋ-ಖೋ ಸಂಸ್ಥೆ ಹಾಗೂ ಹಿರಿಯೂರಿನ ಗರುಡ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿಗೆ ಜುಲೈ 17 ರಿಂದ 19 ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಸಬ್ ಜೂನಿಯರ್ಸ್ ಬಾಲಕರ ಮತ್ತು ಬಾಲಕಿಯರ ಕೋಕೋ ಪಂದ್ಯಾವಳಿಯನ್ನು ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಖೋ-ಖೋ ಪಂದ್ಯಾವಳಿಯಲ್ಲಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ತೃತೀಯ ಮತ್ತು ಚತುರ್ಥ, ಉತ್ತಮ ಹಿಡಿತಗಾರ ಮತ್ತು ಉತ್ತಮ ಓಟಗಾರ ಪ್ರಶಸ್ತಿ ಹಾಗೂ ಸರ್ವೋತ್ತಮ ಆಟಗಾರರಿಗೆ ಆಕರ್ಷಕ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಪ್ರತಿ ಜಿಲ್ಲಾ ಸಂಸ್ಥೆಯಿಂದ ಆಯ್ಕೆಯಾದ ಸಬ್ ಜೂನಿಯರ್ ಬಾಲಕರ ಹಾಗೂ ಬಾಲಕಿಯರ ತಲಾ 25 ತಂಡಗಳು ಸೇರಿ ಒಟ್ಟು 50 ತಂಡಗಳ 900ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಕಾರ್ಯಕ್ರಮ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂಬುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

