
ಹಿರಿಯೂರು :
ರಾಜಕೀಯ ನೇತಾರರನ್ನು ಕರೆಸಿ, ಹೂಮಾಲೆ ಹಾಕಿಸಿಕೊಂಡು ಜೈಕಾರ ಹಾಕಿಸಿಕೊಳ್ಳುವ ಇಂದಿನ ಪ್ರಚಾರಪ್ರಿಯ ಜಗತ್ತಿನಲ್ಲಿ ಹಿರಿಯೂರು ತಾಲೂಕಿನ ಸಲವಮ್ಮನಹಳ್ಳಿಯ ನಿವೃತ್ತ ನೌಕರರಾದ ಸಿದ್ದೇಶ್ ಗೌಡರು ಸಂಪೂರ್ಣ ಭಿನ್ನವಾಗಿ ನಿಲ್ಲುತ್ತಾರೆ. ತಮ್ಮ ಬದುಕಿನ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ನೆನಪನ್ನು ಇಡೀ ಸಮಾಜವೇ ಕೊಂಡಾಡುವಂತೆ ಸಾರ್ಥಕಗೊಳಿಸಿದ್ದಾರೆ.
ತಮ್ಮ ಹೆತ್ತವರಾದ ಶ್ರೀನಾಡಿಗಸಣ್ಣಸಿದ್ದೇಗೌಡರು ಮತ್ತು ಶ್ರೀಮತಿ ಗೌರಮ್ಮನವರ ಜ್ಞಾಪಕಾರ್ಥವಾಗಿ ಹಿರಿಯೂರು ತಾಲೂಕಿನ ಸುಪ್ರಸಿದ್ಧ ಕ್ಷೇತ್ರವಾದ ವದ್ದಿಕೆರೆ ಶ್ರೀಕಾಲಭೈರವೇಶ್ವರ ಹಾಗೂ ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಬಡ ಭಕ್ತಾದಿಗಳ ಅನುಕೂಲಕ್ಕಾಗಿ ಸುಂದರವಾದ ಕಲ್ಯಾಣಸೌಧ ಅಥವಾ “ಸಮುದಾಯಭವನ” ನಿರ್ಮಿಸಿ ಕೊಡುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ಗ್ರಾಮೀಣ ಭಾಗದ ಬಡ ಕುಟುಂಬಗಳ ಅಣ್ಣತಮ್ಮಂದಿರುವ ಆಸ್ತಿ ಭಾಗ ಮಾಡಿಕೊಂಡು ಮನೆ ಮುಂದೆ ಅಂಗಳವೂ ಇಲ್ಲದೆ ಮಕ್ಕಳ ಮದುವೆ, ಮುಂಜಿ ಹಾಗೂ ಇತರೆ ಶುಭಕಾರ್ಯಗಳನ್ನು ಮಾಡಲು ಪಡುತ್ತಿದ್ದ ಪಾಡನ್ನು ಕಂಡು ಸಿದ್ದೇಗೌಡರು ಮನಸ್ಸು ಮಿಡಿದಿತ್ತು. ದೈವಸನ್ನಿಧಿಯಲ್ಲಿ ಒಂದು ಭವನ ಕಟ್ಟಲು ಅನುಮತಿಗಾಗಿ ಇವರು ಸರ್ಕಾರಿ ಕಚೇರಿಗಳಿಗೆ ಅಲೆದು ಐದಾರು ವರ್ಷಗಳೇ ಕಳೆದಿದ್ದವು, ಕೊನೆಗೂ ಇವರ ಮನೆದೇವರ ಹೆಸರಿನಲ್ಲೇ ಬಂದ ಹೊಸ ತಹಶೀಲ್ದಾರ್ ಅವರ ಒಪ್ಪಿಗೆ ದೊರೆತು ಕಳೆದ ಡಿಸೆಂಬರ್ 4 ರಿಂದ ಈ ಭವನದ ಕಾಯಕ ಆರಂಭವಾಯಿತು.
ಯಾವುದೇ ಗುತ್ತಿಗೆ ನೀಡದೆ ತಹಶೀಲ್ದಾರ್ ಅವರಿಗೆ ಕೊಟ್ಟ ಮಾತಿನಂತೆ ಸ್ವತಃ ಸಿದ್ದೇಶ್ ಗೌಡರೇ ಮೂರು ಹೊತ್ತು ನಿಂತು ಕಟ್ಟಡಕ್ಕೆ ನೀರು ಹಾಕಿ ಕೇವಲ ಎಂಟೇ ತಿಂಗಳಲ್ಲಿ ಗುಣಮಟ್ಟದ ಕಲ್ಯಾಣಸೌಧವನ್ನು ಪೂರ್ಣಗೊಳಿಸಿ. ಕೀ ಒಪ್ಪಿಸಿದ್ದಾರೆ. ಈ ಕಲ್ಯಾಣಸೌಧದ ಹಿಂದೆ ಗೌಡರ ಇಡೀ ಬದುಕಿನ ಶಿಸ್ತು ಮತ್ತು ತ್ಯಾಗವಿದೆ.
ಎಂದಿಗೂ ಮೋಜು ಮಸ್ತಿ ಮಾಡದೆ, ಆಟೋ ಹತ್ತದೆ, ಕಾರು ಬಳಸದೆ ಸದಾ ಬಸ್ ನಲ್ಲೇ ಪ್ರಯಾಣಿಸುವ ಸರಳ ಜೀವನ ಇವರದ್ದು, “ನಾ ಉಳಿಸಿದ್ದೇ ನನ್ನ ಆದಾಯ” ಎಂಬ ಘೋಷ ವಾಕ್ಯದೊಂದಿಗೆ ಬದುಕಿ ಕೂಡಿಟ್ಟ ಅಲ್ಪಸ್ವಲ್ಪ ಹಣ ಮತ್ತು ತಮಗೆ ಬರುವ ಪೆನ್ಷನ್ ಮೊತ್ತವನ್ನೆಲ್ಲಾ ಸುರಿದು ಈ ಭವನ ನಿರ್ಮಿಸಿದ್ದಾರೆ.
ವಿಶೇಷವೆಂದರೆ ಇವರ “ಅಭ್ಯುದಯ ಸೇವಾ ಟ್ರಸ್ಟಿ”ಗೆ ಸಾರ್ವಜನಿಕರಿಂದ ಎಂದೂ ಒಂದು ರೂಪಾಯಿ ಚೆಂದ ಅಥವಾ ಕಾಣಿಕೆ ಪಡೆದಿಲ್ಲ, ಇದು ಕೇವಲ ಸಿದ್ದೇಶ್ ಗೌಡರು ಮತ್ತು ಅವರ ಮಕ್ಕಳ ಸ್ವಂತ ದುಡಿಮೆಯ ಕೊಡುಗೆಯಾಗಿದೆ. ನಾವು ಈ ಭೂಮಿ ಮೇಲೆ ಇಲ್ಲದಿದ್ದರೂ ನಮಗೆ ಕಷ್ಟಪಟ್ಟು ಬದುಕು ಕೊಟ್ಟ ಹಿರಿಯರಿಗೆ ಏನಾದರೂ ತಿರುಗಿಸಿಕೊಡಬೇಕು,
ಸಮಾಧಿಯಲ್ಲಿ ಮಲಗಿದಾಗ ನಿನಗೆ ಇಲ್ಲಿ ಜಾಗ ಇಲ್ಲಪ್ಪ ಅನ್ನಿಸಿಕೊಳ್ಳಬಾರದು ಎನ್ನುವ ಸಿದ್ದೇಶ್ ಗೌಡರು ಇಂದು ತಮ್ಮ ಮನೆತನದ ಹಿರಿಯರಿಗೆ ಹಾಗೂ ಮನೆದೇವರ ಪಾದಕ್ಕೆ ಈ ಕಲ್ಯಾಣ ಸೌಧವನ್ನು ಒಪ್ಪಿಸಿ ನಿರಾಳ ನೆಮ್ಮದಿಯ ನಿಟ್ಟಿಸಿರುಬಿಟ್ಟಿದ್ದಾರೆ.
ಶ್ರೀಯುತ ಸಿದ್ದೇಶ್ ಗೌಡ ಅವರೇ ಒಂತರಾ ವಿಶೇಷವಾದ ವ್ಯಕ್ತಿ, ಬಹಳ ಅಭಿಮಾನದಿಂದ ತನ್ನೆಲ್ಲ ಬಂಧು-ಬಳಗ, ಗುರು-ಹಿರಿಯರು, ಗೆಳೆಯರನ್ನು ಕರೆದು, ಅವರ ಮುಖಾಂತರ ಈ ಸತ್ಕಾರ್ಯವನ್ನು ದೇವರಿಗೆ ಒಪ್ಪಿಸಿದ್ದಾರೆ, ಈ ಕಲ್ಯಾಣಸೌಧವನ್ನು ಬಹಳ ಚೆನ್ನಾಗಿ ಕಟ್ಟಿಸಿದ್ದಾರೆ, ಇದನ್ನು ಕಂಡು ಬಹಳ ಖುಷಿಯಾಯಿತು ಎಂಬುದಾಗಿ ಸಿದ್ದೇಶ್ ಗೌಡರ ಆಪ್ತರು ಹಾಗೂ ಗ್ರಾಮಸ್ಥರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
