July 29, 2026
000002

ಹಿರಿಯೂರು :

ತಾಲ್ಲೂಕಿನಲ್ಲೇ ಕಲ್ವಳ್ಳಿ ಭಾಗವು ಅತ್ಯಂತ ಹಿಂದುಳಿದಿದ ಪ್ರದೇಶವಾಗಿದ್ದು, ಈ ಭಾಗದ ಎಲ್ಲಾ ಕೆರೆಗಳಿಗೂ ವಾಣಿವಿಲಾಸ ಸಾಗರದಿಂದ ನೀರನ್ನು ತುಂಬಿಸಬೇಕು, ಈ ಬಗ್ಗೆ ಈ ಭಾಗದ ಜನರು ಹಾಗೂ ರೈತರು ಹಲವಾರು ಹೋರಾಟಗಳನ್ನು ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ, ಇದು ಹೀಗೆ ಮುಂದುವರೆದರೆ ಕಲ್ವಳ್ಳಿ ಜನ ಬರುವ ಬೇಸಿಗೆಯಲ್ಲಿ ಪ್ರತಿ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದಾಗಿ ರೈತ ಮುಖಂಡ ಹಾಗೂ ಖ್ಯಾತ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಹಿರಿಯೂರು ತಾಲೂಕು ಜೆಜಿಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿದಂತೆ ಕಲ್ವಳ್ಳಿ ಭಾಗದ ಸುಮಾರು 16 ಕೆರೆಗಳಿಗೆ ನೀರು ತುಂಬಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರರವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಜಿಲ್ಲಾ ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಕಲ್ವಳ್ಳಿ ಭಾಗದಲ್ಲಿ ರೈತರು ಸಾವಿರಾರು ಅಡಿ ಬೋರ್ವೆಲ್ ಕೊರೆದರು ಒಂದು ಹನಿ ನೀರು ಬರುತ್ತಿಲ್ಲ, ಈ ಕೂಡಲೇ ಸರ್ಕಾರ ಸ್ಪಂದಿಸಿ, ವಾಣಿವಿಲಾಸ ಸಾಗರದಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು, ಈ ಬಗ್ಗೆ ಅನೇಕ ಚಳುವಳಿ ಹೋರಾಟಗಳನ್ನು ಹಮ್ಮಿಕೊಂಡು ಸರ್ಕಾರದ ಗಮನ ಸೆಳೆದಿದ್ದರೂ ಸಹ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ  ಹೇಳಿದರು.

ಸರ್ಕಾರ ಈಗಾಗಲೇ ವಾಣಿವಿಲಾಸ ಜಲಾಶಯದಿಂದ 3 ಟಿಎಂಸಿ ವಾಟರ್ ಅಲೋಕೇಷನ್ ಆಗಿದ್ದು, ಅದು ಡಿಪಿಆರ್ ಕೂಡ ಅನುಮೋದನೆ ಆಗಿದೆ, ಈಗ ತಾವುಗಳು ತುರ್ತಾಗಿ ಕ್ಯಾಬಿನೆಟ್ ಅನುಮೋದನೆ ಕೊಟ್ಟು ಟೆಂಡರ್ ಕರೆದು ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಈ ಭಾಗದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೂ ಮೇವು ಮತ್ತು ರೈತರ ಸಾಕಿರುವ ತೋಟಗಳು ನೀರಿಲ್ಲದೆ ಒಣಗುತ್ತಿವೆ,

ಆದ್ದರಿಂದ ತುರ್ತಾಗಿ ಕಲ್ವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಿ, ನೀರು ಹರಿಸಲು ಮುಂದಾಗದಿದ್ದರೆ, ಮುಂಬರುವ ಉಪಚುನಾವಣೆಯಲ್ಲಿ ಈ ಭಾಗದ ಕೃಷಿಕರು ಹಾಗೂ ಸಾವಿರಾರು ಕೃಷಿಕ ಕಾರ್ಮಿಕರು ಸೇರಿದಂತೆ ಈ ಭಾಗದ ಎಲ್ಲಾ ಹಳ್ಳಿಯ ಜನರು ಹಾಗೂ ಮತದಾರರು ತಮ್ಮ ಮತವನ್ನು ಚಲಾಯಿಸದೆ ಬರಲಿರುವ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಲ್ವಳಿ ಭಾಗದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಗಿರಿ ಮಾತನಾಡಿ, ಕಲ್ವಳ್ಳಿ ಭಾಗದ ಜನ ಈಗಾಗಲೇ ಮಳೆ ಇಲ್ಲದ ಕಾರಣ ಬೆಂಗಳೂರು ಹಾಗೂ ಮಲೆನಾಡಿನ ಪ್ರದೇಶಗಳಿಗೆ ಗೂಳೇ ಹೋಗುತ್ತಿದ್ದು, ನಮ್ಮನ್ನ ರಕ್ಷಿಸಿ, ನೀರು ಹರಿಸದೆ ಹೋದರೆ ನಾವು ಸತ್ತಿದ್ದೇವೆ ನಮ್ಮಿಂದ ಏಕೆ ವೋಟನ್ನು ಕೇಳುತ್ತೀರಾ ಬರುವ ಚುನಾವಣೆಯಲ್ಲಿ ಕಲ್ವಳ್ಳಿ ಭಾಗದ ಗೇಟ್ ಇಂದ ಹೊರಗಿರಿ ಎಂದು ರಾಜಕೀಯ ಮುಖಂಡರುಗಳಿಗೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಕಲ್ವಳ್ಳಿ ಭಾಗದ ನೀರಾವರಿ ಹೋರಾಟ ಸಮಿತಿಯು ಇಂದು ಸಾವಿರಾರು ಜನರ ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಗೌಡನಹಳ್ಳಿಯಿಂದ ಹಿಡಿದು ಮಾಳಗೊಂಡನಹಳ್ಳಿ ದಿಂಡಾವರ ದುಗ್ಗಾನಿಹಟ್ಟಿ ಹೊಸಳ್ಳಿ ಚಿಗಳಿಕಟ್ಟೆ ಯಲ್ಲದಕೆರೆ ಮಾರ್ಗವಾಗಿ ಹಿರಿಯೂರಿಗೆ ಬಂದು ಹಿರಿಯೂರು ರಂಜಿತ್ ಹೋಟೆಲ್ ದಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಯನ್ನು ತಲುಪಿ, ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ರೈತಮುಖಂಡ ಹಾಗೂ ಖ್ಯಾತ ಪತ್ರಕರ್ತ ಲಕ್ಷ್ಮಣ್ ಹೂಗಾರ್, ರೈತಮುಖಂಡರುಗಳಾದ ಆಲೂರುಸಿದ್ದರಾಮಣ್ಣ, ಚಂದ್ರಗಿರಿಬಳಗಟ್ಟ, ಅಭಿಷೇಕ್ ಗೌಡನಹಳ್ಳಿ, ನಾಗರಾಜ್, ಪ್ರಕಾಶ್, ಸೂರಪ್ಪನಹಟ್ಟಿಕೃಷ್ಣ, ದಿಂಡಾವರವಿರೂಪಾಕ್ಷ, ಗಿರೀಶಗೌಡ, ಮಹಂತೇಶ್, ವೆಂಕಟೇಶಗೌಡನಹಳ್ಳಿ, ಶ್ರೀಪತಿಗೌಡನಳ್ಳಿ, ನಾಗರಾಜ್, ಸುರೇಶ್, ರಾಜಣ್ಣ, ಜಯಪ್ರಕಾಶ, ಪರಮೇಶ್, ಚಿಗಳಿಕಟ್ಟೆಮಣಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *