July 30, 2026
00005

ಹಿರಿಯೂರು :     

ಹಿರಿಯೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುವ ವಿಶ್ವಾಸವಿದ್ದು ಈಗಾಗಲೇ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳನ್ನು ಒಗ್ಗೂಡಿಸುವ ಕೆಲಸ ಮಾಡುವ ಮೂಲಕ ಸ್ಥಳೀಯ ಅಭ್ಯರ್ಥಿಯಾಗಿ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂಬುದಾಗಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾoಕ್ಷಿಯಾಗಿರುವ ಆರ್.ಮಂಜುನಾಥ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಉಪ ಚುನಾವಣೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.ಇದು ಅನಿರೀಕ್ಷಿತವಾಗಿ ಬಂದ ಚುನಾವಣೆಯಾಗಿದ್ದು ಕಾಂಗ್ರೆಸ್ ಪಕ್ಷವನ್ನು ತಾಲೂಕಲ್ಲಿ ತಳ ಮಟ್ಟದಿಂದ ಕಟ್ಟುವ ಸಂಕಲ್ಪ ಮಾಡಿದ್ದೇನೆ. ನಾನು ಸಹ ಸುಮಾರು 40 ವರ್ಷದಿಂದ ಪಕ್ಷದ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ ಎಂದರಲ್ಲದೆ,

ಹತ್ತು ವರ್ಷ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಕೆಲಸ ನಿರ್ವಹಿಸಿದ್ದೇನೆ. ನಿರಂತರವಾಗಿ ಪಕ್ಷದ ಸೇವೆ ಮಾಡಿದ್ದೇನೆ. 1994 ರಲ್ಲಿ  ಕೇವಲ ಮೂವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಂತ ಸಮಯದಲ್ಲಿ ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾದೆ.ಆಗ ಅವಿರತವಾಗಿ ರಾಜ್ಯದ ಉದ್ದಗಲಕ್ಕೂ ಓಡಾಡಿ ನಾಡಿನ ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕಾರ್ಯ ಮಾಡಿದ್ದೇನೆ.

ಅಲ್ಲದೆ ಇದೇ ಸಂದರ್ಭದಲ್ಲಿ 1999 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಯಿತು. ಆನಂತರ ನನಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕೈತಪ್ಪಿ ಹೋಗಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಯಿತು. ಅಲ್ಲಿಯೂ ಹೋರಾಟ ನಡೆಸಿದರು ಸಹ ಕೇವಲ 20 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು.ಆದರೆ ಎಂದಿಗೂ ಎದೆಗುಂದದೆ ನಿರಂತರವಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಾ ಬಂದಿದ್ದೇನೆ.

ಇದೀಗ ಉಪ ಚುನಾವಣೆ ಟಿಕೆಟ್ ಸಿಗುವ ನಿರೀಕ್ಷೆ ಇದ್ದು ತಾಲೂಕಿನಲ್ಲಿ 3 ವರ್ಷದಿಂದ ಪಕ್ಷ ಕಟ್ಟುವ ಕೆಲಸ ಹಿಂದುಳಿದಿದೆ. ಹಾಗಾಗಿ ಮುಖಂಡರನ್ನೆಲ್ಲಾ ಒಗ್ಗೂಡಿಸಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಐದು ಗ್ಯಾರಂಟಿಗಳು ಬಡವರಿಗೆ ಅನುಕೂಲ ಆಗುತ್ತಿದ್ದು, ಈ ಎಲ್ಲಾ ಗ್ಯಾರೆಂಟಿಗಳನ್ನು ಸರಿಯಾಗಿ ಬಡವರ ಮನೆ ಬಾಗಿಲಿಗೆ ತಲುಪಿಸಬೇಕಾಗಿದೆ.

ಕಾಂಗ್ರೆಸ್ ಪಕ್ಷ ನಿರಂತರ ಬಡವರ ಪರವಾಗಿರುವ ಪಕ್ಷವಾಗಿದ್ದು, “ಭಾರತ್ ಜೋಡೋ” ಮೂಲಕ ಯುವಕ ಯುವತಿಯರ ಸಂಘಟನೆ ಮಾಡಲಾಗಿದೆ. ತಾಲೂಕಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಅದರ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು. ವಾಣಿವಿಲಾಸ ಸಾಗರವನ್ನು ತಾಲೂಕಿನ ರೈತಾಪಿ ಜನರಿಗೆಂದು ಕಟ್ಟಿದ್ದರು ಸಹ ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ.

ಜಲ ಸಂಪನ್ಮೂಲ ಮಂತ್ರಿಗಳ ಬಳಿ ನಿಯೋಗ ಒಯ್ದು ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡಲಾಗುವುದು. ಬರುವ ಉಪ ಚುನಾವಣೆಯಲ್ಲಿ ನೀರಿನ ಸಮಸ್ಯೆ ಮುಖ್ಯ ಪಾತ್ರ ವಹಿಸಲಿದೆ.ಎಸ್ ಐ ಆರ್ ನಿಂದ ಬಡವರ, ಅಲ್ಪ ಸಂಖ್ಯಾತರ ಮತ ತೆಗೆಯುವ ತಂತ್ರ ನಡೆಯಲಿದೆ.ಪಶ್ಚಿಮಬಂಗಾಳ ಮತ್ತು ತಮಿಳುನಾಡಿನಲ್ಲಿ ಮತ ತೆಗೆದು ಅವರನ್ನು ಸೋಲಿಸಲಾಯಿತು.

ಹಾಗಾಗಿ ಕಾಂಗ್ರೆಸ್ ಮತದಾರರ ಮತದಾನದ ಹಕ್ಕನ್ನು ಉಳಿಸಬೇಕಿದೆ. ಕಾಂಗ್ರೆಸ್ ಪಕ್ಷದ ಮತಗಳನ್ನು ತೆಗೆಯುವ ಹುನ್ನಾರ ಇದಾಗಿದ್ದು ಪಕ್ಷದ ಕಾರ್ಯಕರ್ತರು ಎಚ್ಚರ ವಹಿಸಬೇಕು.ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು ಅದರ ಪುನಃಚೇತನಕ್ಕೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗುವುದು.

ಮೃತ ಶಾಸಕರ ಪರಿವಾರಕ್ಕೆ ಟಿಕೆಟ್ ಕೊಡುವ ಕಾನೂನೇನು ಪಕ್ಷದಲ್ಲಿ ಇಲ್ಲ.ಸಮಯ ಸಂದರ್ಭಕ್ಕನುಗುಣವಾಗಿ ಟಿಕೆಟ್ ನೀಡಿದ್ದಾರೆ ಅಷ್ಟೇ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷದ ಗೆರೆ ದಾಟುವುದಿಲ್ಲ. ತಾಲೂಕು ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಳಿಲ್ಲ. ಇದ್ದರೂ ಪಕ್ಷದ ತೀರ್ಮಾನವೇ ಅಂತಿಮವಾಗಲಿದೆ ಎಂಬುದಾಗಿ ಅವರು ಹೇಳಿದರು.

ಈ ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ ಹೆಚ್ ಮಂಜುನಾಥ್,ಪದ್ಮನಾಭ್, ಸಾದತ್ ಉಲ್ಲಾ, ಹೆಚ್ ಆರ್ ತಿಮ್ಮಯ್ಯ, ಕಲಾವತಿ, ಗೀತಾಓಬಳೇಶ್, ದಾದಾಪೀರ್, ಮಹಮ್ಮದ್ ರಫೀಕ್,ಧ್ರುವ ಕುಮಾರ್, ಸುಬಾನ್ ಮುಂತಾದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *