
ಹಿರಿಯೂರು:
ಸ್ವಾರ್ಥರಹಿತವಾಗಿ ಸುಮಾರು ಐದು ದಶಕಗಳ ಕಾಲ ಜನಪರ ಮತ್ತು ನೀರಾವರಿ ಹೋರಾಟಗಾರರಾಗಿ, ನೀರಾವರಿ ವಿಚಾರವಾದ ಸುದ್ದಿಗಳ ಮೂಲಕ ಬರಹಗಾರರಾಗಿ, ಸಾಹಿತಿಯಾಗಿ ಆಂಗ್ಲಭಾಷೆಯ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಗಾರರಗಾಗಿ ಉಜ್ಜಿನಪ್ಪನವರ ಸೇವೆ ನಮ್ಮ ಜಿಲ್ಲೆಯಲ್ಲಿ ಅಮರವಾಗಿ ಉಳಿದಿದೆ ಎಂಬುದಾಗಿ ಹಿರಿಯ ಪತ್ರಕರ್ತರಾದ ಎನ್.ಎಲ್. ಬಸವರಾಜ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿ ಎಸ್ ಉಜ್ಜಿನಪ್ಪನವರ ಸ್ಮರಣಾರ್ಥ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಜಿ ಎಸ್. ಉಜ್ಜಿನಪ್ಪ ವಯೋಸಹಜ ಕಾಯಿಲೆಗಳ ನಡುವೆಯೂ ಲವಲವಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸುದ್ದಿ ಸಂಗ್ರಹಿಸುತ್ತಿದ್ದರು. ನಾಡಿನ ಪ್ರಸಿದ್ದ ಕವಿಗಳು ಬರೆದಿರುವ ಕವಿತೆ ಹಾಡುಗಳನ್ನು ಹಾಡುವ ಮೂಲಕ ಅದರ ಅರ್ಥಗಳನ್ನೀ ವಿಶ್ಲೇಷಿಸುತ್ತಿದ್ದ ಪದಗಳು ಇಂದಿಗೂ ನಮ್ಮ ಕಿವಿಗಳಲ್ಲಿ ಗುನುಗುತ್ತವೆ. ನೈಜ ವರದಿಗಳು ಶಿಸ್ತು ಸ್ನೇಹಪರ ಚಿಂತನೆಗಳ ಮೂಲಕ ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂಎಲ್. ಗಿರಿಧರ್, ಪ್ರಧಾನ ಕಾರ್ಯದರ್ಶಿ ಚಿದಾನಂದ್ ಎಂ ಮಸ್ಕಲ್, ಹಿರಿಯ ಪತ್ರಕರ್ತರಾದ ಖಂಡೇನಹಳ್ಳಿ ಬಸವರಾಜ್, ರಮೇಶ್ ಬಿದರಿಕೆರೆ, ರಾಜಣ್ಣಹರ್ತಿಕೋಟೆ, ಶಿವಶಂಕರ್ ಮಠದ್, ಪ್ರಸನ್ನ, ಹನುಮಂತರಾಯ, ಸಾಮಾಜಿಕ ಕಾರ್ಯಕರ್ತ ಚಮನ್ ಷರಿಪ್, ಡಾ. ತ್ರಿವೇಣಿ ಇತರರಿದ್ದರು.
