May 31, 2026
00000001

ಹಿರಿಯೂರು :

ಶ್ರೀಶಾರದಾಶ್ರಮದ ಉದ್ಘಾಟನೆಯಿಂದ ಈವರೆಗೂ ಆಶ್ರಮದ ಶ್ರೇಯೋಭಿವೃದ್ಧಿಗೆ ಅನೇಕ ರೀತಿಯಲ್ಲಿ ಶ್ರಮಿಸಿದ ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಲ್ಲಿ ಡಾ.ಶ್ರೀಪತಿಯವರು ಸಹ ಒಬ್ಬರಾಗಿದ್ದಾರೆ, ವೈದ್ಯಕೀಯ ವೃತ್ತಿಯ ಜೊತೆಜೊತೆಗೆ ಸಮಾಜಸೇವೆಯಲ್ಲೂ ಸಹ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅಪಾರವಾದಂತ ಜನಮೆಚ್ಚುಗೆಯನ್ನು ಗಳಿಸಿದ್ದರು ಎಂಬುದಾಗಿ ಶ್ರೀಶಾರದಾಶ್ರಮದ ಮಾತಾಚೈತನ್ಯಮಯಿ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಶ್ರೀಪತಿಯವರ ಕುರಿತು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ.ಶ್ರೀಪತಿಯವರ ಅತ್ಯಂತ ಸರಳ, ಸ್ನೇಹಮಯ ವ್ಯಕ್ತಿತ್ವ ಉಳ್ಳವರಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಹಲವಾರು ಜನರು ಕೂಡ ಇವರ ಸೇವೆಯನ್ನು ಹುಡುಕಿಕೊಂಡು ಬರುವಂತೆ ಮಾಡಿತ್ತು, ಡಾ.ಶ್ರೀಪತಿಯವರು ರೋಗಿಗಳನ್ನು ನೋಡಿಕೊಳ್ಳುವ ರೀತಿ, ಅವರಿಗೆ ಆತ್ಮೀಯವಾಗಿ ನೀಡುತ್ತಿದ್ದ ಚಿಕಿತ್ಸೆ ಅತ್ಯಂತ ಜನಮೆಚ್ಚುಗೆಗೆ ಪಾತ್ರವಾಗಿದ್ದ ಡಾ.ಶ್ರೀಪತಿಯವರ ನಿಧನ ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಮಾತಾಜಿ ಹೇಳಿದರು.

ಬಿಜೆಪಿ ಮುಖಂಡರು ಹಾಗೂ ಡಿ.ಸಿ.ಸಿ ಬ್ಯಾಕ್ ಮಾಜಿ ಅಧ್ಯಕ್ಷರಾದ ಲಕ್ಷ್ಮೀಕಾಂತ್ ಮಾತನಾಡಿ, ಡಾ.ಶ್ರೀಪತಿರವರು ಸರ್ಕಾರಿ ವೈದ್ಯರಾಗಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಿ, ರೋಟರಿ ಮತ್ತು ತಾಲ್ಲೂಕು ವೈದ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ವೇದಾಬ್ಯಾಂಕ್ ಅಧ್ಯಕ್ಷರಾಗಿ ಜನಪ್ರಿಯತೆ ಗಳಿಸಿದ ಜನಮೆಚ್ಚಿನ ವೈದ್ಯರಾಗಿ ಸಹ ಹೆಸರು ಮಾಡಿದ್ದಾರೆ, ಮಧ್ಯರಾತ್ರಿಯ ಸಮಯದಲ್ಲೂ ಸಹ ಚಿಕಿತ್ಸೆಗಾಗಿ ಬಂದ ರೋಗಿಗಳಿಗೆ ವೈದ್ಯಕೀಯ ಸೇವೆ ಕೊಟ್ಟಂತಹ ಧೀಮಂತನಾಯಕ ಎಂಬುದಾಗಿ ಹೇಳಿದರು.

ರೆಡ್ ಕ್ರಾಸ್ ಚೇರ್ಮನ್ ಹೆಚ್.ಸುಂದರ್ ರಾಜ್ ಮಾತನಾಡಿ, ಈ ತಾಲ್ಲೂಕಿನ ಹೆಸರಾಂತ ಮೂಳೆರೋಗ ತಜ್ಞರಾಗಿದ್ದರೂ ಸಹ ಜನಸಾಮಾನ್ಯರ ಎಲ್ಲಾ ರೋಗಗಳಿಗೂ ಸಹ ಚಿಕಿತ್ಸೆ ನೀಡುತ್ತಿದ್ದರು, ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ಕೊಡುತ್ತಿದ್ದ ಡಾ.ಶ್ರೀಪತಿಯವರನ್ನು ಜನರು ಹುಡುಕಿಕೊಂಡು ಬರುತ್ತಿದ್ದರು, ಈ ತಾಲ್ಲೂಕಿನ ದೂರದ ಊರುಗಳಿಂದ ಅಲ್ಲದೆ ತಾಲ್ಲೂಕಿನ ಆಚೆಗಿನ ಚಳ್ಳಕೆರೆ ತರೀಕೆರೆಯಿಂದಲೂ ಅನೇಕ ರೋಗಿಗಳು ಅವರು ಹುಡುಕಿಕೊಂಡು ಬಂದು ಚಿಕಿತ್ಸೆ ಪಡೆದ ಉದಾಹರಣೆಗಳಿವೆ  ಎಂಬುದಾಗಿ ಹೇಳಿದರು.

ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಮಾತನಾಡಿ, ಡಾ.ಶ್ರೀಪತಿಯವರು ಜಿಲ್ಲಾ ಆರೋಗ್ಯ ಅಧಿಕಾರಿಗಳಾಗಿದ್ದರೂ ಯಾವುದೇ ಹಮ್ಮು, ಬಿಮ್ಮು ಅಹಂಕಾರ ಇಲ್ಲದಂತಹ ಸರಳ ಸಹಕಾರ ಮೂರ್ತಿಯಾಗಿದ್ದರು, ಅಷ್ಟೇ ಅಲ್ಲ ಅನೇಕ ಬಡ ರೋಗಿಗಳ ಪಾಲಿನ ಆರಾಧ್ಯ ದೈವವಾಗಿದ್ದರು, ಅವರು ರೋಗಿಗಳನ್ನು ಮಾತನಾಡಿಸುವ ಶೈಲಿ ಹಾಗೂ ಅವರ ಮೋಹಕ ಮುಗುಳ್ನಗೆಗೆ ಅನೇಕ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿ ಇತ್ತು ಎಂಬುದಾಗಿ ಹೇಳಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಎಸ್.ರಾಘವೇಂದ್ರರವರು ಡಾ.ಶ್ರೀಪತಿಯವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸುವಂತಿಲ್ಲ, ಅವರು ಜಾತಿ, ಮತ, ಕುಲವನ್ನು ಮೀರಿದಂತಹ ವ್ಯಕ್ತಿಯಾಗಿದ್ದರು, ಡಾ.ಶ್ರೀಪತಿಯವರು ವೈದ್ಯಕೀಯ ಕ್ಷೇತ್ರ ಸೇರಿದಂತೆ ಸಹಕಾರಿ ಕ್ಷೇತ್ರದಲ್ಲೂ ಸಹ ಜನಾನುರಾಗಿಯಾಗಿದ್ದು, ವೇದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವ ಮೂಲಕ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಥಿಯಾಸಾಫಿಕಲ್ ಸೊಸೈಟಿ ಅಧ್ಯಕ್ಷ ಎಲ್.ಆನಂದಶೆಟ್ಟಿ, ನಿವೃತ್ತ ಪ್ರಾಂಶುಪಾಲರು ಹಾಗೂ ರೊಟೇರಿಯನ್ ಹೆಚ್.ಎಂ.ಬಸವರಾಜ್, ಹಾಗೂ ಕೆ.ಟಿ.ಪ್ರಕಾಶ್ ಕುಮಾರ್, ಪ್ರೋಫೇಷನಲ್ ಕೋರಿಯರ್ ಶಿವರಾಂ, ರೈತಮುಖಂಡ ಆರನಕಟ್ಟೆ ಶಿವಕುಮಾರ್, ಯಶವಂತ್ ರಾಜ್, ಶ್ರೀಮತಿ ಡಾ.ಮಂಜುಳಾಗುರುಮೂರ್ತಿ ಇತರರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶಶಿಕಲಾರವಿಶಂಕರ್, ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆ ಸದಸ್ಯರುಗಳಾದ ಬಿ.ಕೆ.ನಾಗಣ್ಣ, ದೇವರಾಜ್ ಮೂರ್ತಿ, ಟಿ.ಮಲ್ಲೇಶಪ್ಪ, ಸತ್ಯನಾರಾಯಣ, ಚಂದ್ರಕೀರ್ತಿ ಗುಜ್ಜಾರ್, ಆಡಿಟರ್ ಶಿವಕುಮಾರ್, ಪಿ.ಆರ್.ಸತೀಶ್ ಬಾಬು, ಸಲಬೊಮ್ಮನಹಳ್ಳಿ ಸಿದ್ದೇಶ್, ಡಾ.ಶಿವಣ್ಣರೆಡ್ಡಿ, ವಸಂತಕುಮಾರ್, ಮಹಾಬಲೇಶ್ವರಶೆಟ್ಟಿ, ಎಸ್.ಎಲ್.ಎನ್.ವೆಂಕಟೇಶ್, ಪ್ರೋ.ಶಿವಪ್ರಕಾಶ್, ಪ್ರಶಾಂತ್ ಬಾಬು, ಧನರಾಜ್ ಜೈನ್, ಜಯಂತಿಲಾಲ್ ಜೈನ್, ಉದ್ಯಮಿ ರಂಗನಾಥಪ್ಪ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಡಾ.ಶ್ರೀಪತಿಯವರ ಮಕ್ಕಳಾದ ಗೌತಮ್, ಹಾಗೂ ಅವರ ಪತ್ನಿ ಶ್ರೀಮತಿ ಭಾಗ್ಯ ಉಪಸ್ಥಿತರಿದ್ದರು. ಆರ್ಯ ವೈಶ್ಯ ಸಮಾಜದ ಶ್ರೀಮತಿ ಗೀತಾರಾಧಾಕೃಷ್ಣ, ನಾಗಸುಂದರಮ್ಮ, ಚಂದ್ರವದನಾ, ಪದ್ಮಜಾ, ಸರಸ್ವತಿನಾಗರಾಜ್ ರವರ ತಂಡದಿಂದ ಡಾ.ಶ್ರೀಪತಿಯವರ ಸ್ಮರಣಾರ್ಥ ಭಜನೆ ಕಾರ್ಯಕ್ರಮ ನಡೆಸಲಾಯಿತು. ರೆಡ್ ಕ್ರಾಸ್ ವೈಸ್ ಚೇರ್ಮನ್ ಎ.ರಾಘವೇಂದ್ರ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

About The Author

Leave a Reply

Your email address will not be published. Required fields are marked *