
ಹಿರಿಯೂರು:
ನಗರದ ಕಾಂಗ್ರೆಸ್ ಪಕ್ಷದ ಕಚೇರಿಗೆ ಮಾಜಿ ಸಚಿವರಾದ ದಿವಂಗತ ಡಿ.ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಹಾಗೂ ಅವರ ಅಳಿಯ ನಿತೀಶ್ ಅವರು ಇಂದು ಭೇಟಿ ನೀಡಿ, ಡಿ.ಸುಧಾಕರ್ ರವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು, ಈ ಸಂದರ್ಭದಲ್ಲಿ ಸಚಿವರಾದ ಡಿ.ಸುಧಾಕರ್ ರವರ ಅತ್ಯಂತ ನಿಕಟವರ್ತಿಗಳು ಹಾಗೂ ಚಿತ್ರದುರ್ಗ ಶಾಸಕರಾದ ವೀರೇಂದ್ರಪಪ್ಪಿ ಉಪಸ್ಥಿತರಿದ್ದರು.

ಕಚೇರಿಗೆ ಆಗಮಿಸಿದ ಈ ಯುವ ಮುಖಂಡರುಗಳು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಕೆಲವು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಪಕ್ಷದ ಸಂಘಟನೆಯ ಕುರಿತು ಕಾರ್ಯಕರ್ತರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಯಿತು.

ದಿವಂಗತ ಡಿ.ಸುಧಾಕರ್ ಅವರ ನಿಧನದ ನಂತರ ಕ್ಷೇತ್ರದಲ್ಲಿ ಆಗಿರುವ ರಾಜಕೀಯ ಸ್ಥಿತ್ಯಂತರಗಳ ಮಧ್ಯೆ, ಅವರ ಕುಟುಂಬದ ಯುವ ನಾಯಕರು ಒಟ್ಟಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿರುವುದು ಸ್ಥಳೀಯ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಈ ಭೇಟಿಯು ಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹೊಸ ಸಂಚಲನ ಮೂಡಿಸುವ ಮುನ್ಸೂಚನೆ ನೀಡಿದ್ದು, ಕಾರ್ಯಕರ್ತರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

ಸ್ಥಳೀಯ ರಾಜಕಾರಣದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ನಡೆ ಏನಿರಬಹುದು ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
