
ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಡಿ.ಸುಧಾಕರ್ ರವರು ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಾಗಿದ್ದ ದಿವಂಗತ ಡಾ.ಶ್ರೀಪತಿಯವರು ಈ ಇಬ್ಬರೂ ವ್ಯಕ್ತಿಗಳು ವಿಶಿಷ್ಠ ವ್ಯಕ್ತಿಗಳಾಗಿದ್ದು, ನಮ್ಮ ತಾಲ್ಲೂಕಿಗೆ, ಜಿಲ್ಲೆಗೆ, ವಿಶಿಷ್ಠವಾದ ಸೇವೆ ಸಲ್ಲಿಸಿದ್ದು, ಇವರನ್ನು ಯಾವುದೇ ಜಾತಿ, ಮತ, ಕುಲಕ್ಕೆ ಸೀಮಿತಗೊಳಿಸಬಾರದು, ಇವರು ಎಲ್ಲಾ ಜಾತಿ, ಮತ, ಕುಲಗಳನ್ನು ಮೀರಿದ ವ್ಯಕ್ತಿಗಳಾಗಿದ್ದರು ಎಂಬುದಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಾಗಿದ್ದ ಡಾ.ಶ್ರೀಪತಿಯವರ ಕುರಿತು ಹಮ್ಮಿಕೊಳ್ಳಲಾಗಿದ್ದ “ನುಡಿನಮನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಕೀಯವಾಗಿ ಏನೆಲ್ಲಾ ವ್ಯತ್ಯಾಸಗಳಿದ್ದರೂ ಸಚಿವ ಡಿ.ಸುಧಾಕರ್ ರವರು ಮೊದಲ ಬಾರಿಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾದ ಭದ್ರಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲು ಹಾಕಿಸಿ, ಬದ್ಧತೆಯಿಂದ ಕೆಲಸ ಪ್ರಾರಂಭಿಸಿದರೆ ಆನಂತರ ಶಾಸಕರಾಗಿ ಬಂದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರು ತಾತ್ಕಾಲಿಕ ಬೈಪಾಸ್ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಿ, ವಾಣಿವಿಲಾಸ ಸಾಗರ ಕೋಡಿ ಬೀಳಲು ಕಾರಣರಾದರು,

ಆನಂತರ ಮತ್ತೆ ಈ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾದ ಡಿ.ಸುಧಾಕರ್ ರವರು ಭದ್ರಾ ನೀರು ಹರಿಸುವುದಕ್ಕಿದ್ದ ಅಡೆತಡೆಗಳನ್ನು ನಿವಾರಿಸಿ, ವಾಣಿವಿಲಾಸ ಸಾಗರಕ್ಕೆ ಶಾಶ್ವತವಾಗಿ ಭದ್ರೆ ನೀರು ಹರಿಸುವ ಮೂಲಕ ಒಂದೇ ವರ್ಷದಲ್ಲಿ ವಾಣಿವಿಲಾಸ ಸಾಗರ ಕೋಡಿ ಬೀಳಲು ಕಾರಣರಾದರು, ಅಲ್ಲದೆ ವೇದಾವತಿ ನದಿಯ ಉದ್ದಕ್ಕೂ ತಾಲ್ಲೂಕಿನಾದ್ಯಂತ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದರು ಎಂಬುದಾಗಿ ಹೇಳಿದರು.
ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳಾಗಿದ್ದ ಡಾ.ಶ್ರೀಪತಿಯವರು ವೈದ್ಯಕೀಯ ಕ್ಷೇತ್ರ ಅಷ್ಟೇ ಅಲ್ಲ, ಸಹಕಾರ ಕ್ಷೇತ್ರದಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡು ವೇದಾಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿ, ಸಹಕಾರಿ ಕ್ಷೇತ್ರದಲ್ಲೂ ಸಹ ಅವಿರತ ಸೇವೆ ಸಲ್ಲಿಸುವ ಮೂಲಕ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ, ಉತ್ತಮ ಸಹಕಾರಿಗಳನ್ನು ತಯಾರು ಮಾಡಿದ್ದಾರೆ, ಇವರ ನಿಧನ ಸಹಕಾರಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ರಾಜ್ಯ ರೈತಸಂಘದ ವಿಭಾಗೀಯ ಕಾರ್ಯಾಧ್ಯಕ್ಷರಾದ ಕೆ.ಸಿ.ಹೋರಕೇರಪ್ಪ ಮಾತನಾಡಿ, ಸಚಿವರಾದ ಡಿ.ಸುಧಾಕರ್ ರವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ತಾಲ್ಲೂಕಿನ ಹಲವಾರು ಯುವಕ-ಯುವತಿಯರಿಗೆ ಶಿಕ್ಷಣ ಕೊಟ್ಟಿದ್ದಾರೆ, ಉದ್ಯೋಗ ನೀಡಿದ್ದಾರೆ, ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿದ್ದಾರೆ, ನಮ್ಮ ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸುವ ಮೂಲಕ ಸಾವಿರಾರು ರೈತರ ಬದುಕನ್ನು ಹಸನಾಗಿಸಿದ್ದಾರೆ ಎಂದರಲ್ಲದೆ,
ಶಿಕ್ಷಣಪ್ರೇಮಿ ಎಂದೇ ಹೆಸರಾದ ಡಿ.ಸುಧಾಕರ್ ರವರು ತಾಲ್ಲೂಕಿನಲ್ಲಿ ಮುರಾರ್ಜಿ ಶಾಲೆ, ಅಬ್ದುಲ್ ಕಲಾಂಶಾಲೆಗಳಂತಹ ಅನೇಕ ವಸತಿ ಶಾಲೆಗಳನ್ನು ಆರಂಭಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರಲ್ಲದೆ, ರೈತರಿಗೆ ಮಳೆ ಹಾನಿ, ಬೆಳೆ ಹಾನಿ, ಅಪಘಾತ, ಅವಘಡಗಳ ಸಂದರ್ಭದಲ್ಲೂ ಸಹ ಲಕ್ಷಾಂತರ ರೂಗಳ ಪರಿಹಾರವನ್ನು ನೀಡಿದ್ದಾರೆ, ಗ್ರಾಮೀಣ ಪ್ರದೇಶ ಸೇರಿದಂತೆ ತಾಲ್ಲೂಕಿನ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅವಿರತ ಶ್ರಮಿಸಿದ್ದಾರೆ ಎಂದರಲ್ಲದೆ,

ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ಶ್ರೀಪತಿಯವರು ಜನಸ್ನೇಹಿ ವೈದ್ಯರಾಗಿದ್ದು, ಇವರು ವೈದ್ಯಕೀಯ ಕ್ಷೇತ್ರದ ಜೊತೆಗೆ ರೋಟರಿಯಂತಹ ಸಂಘ-ಸಂಸ್ಥೆಗಳಲ್ಲೂ ಸಹ ತಮ್ಮನ್ನು ಗುರುತಿಸಿಕೊಂಡು ಸಹಕಾರಿ ಕ್ಷೇತ್ರದಲ್ಲೂ ಸಹ ಅವಿರತ ಸೇವೆ ಸಲ್ಲಿಸಿದ್ದಾರೆ, ವೇದಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷರಾದ ಬಸವರಾಜ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಪಿ.ಆರ್.ಸತೀಶ್ ಬಾಬು, ಸವಿತಾ ಸಮಾಜದ ಮುಖಂಡರಾದ ರಂಗನಾಥ್, ಕರಿಯಣ್ಣ, ನರಸಿಂಹಮೂರ್ತಿ, ಇಳಂಗೋವ್, ಸಂಘಟನೆ ಮುಖಂಡರಾದ ರಮೇಶ್, ಸಂಘಟನೆ ಗೌರವಾಧ್ಯಕ್ಷರಾದ ಗಣೇಶ್, ಉಪಸ್ಥಿತರಿದ್ದರು. ಆರಂಭದಲ್ಲಿ ಪತ್ರಕರ್ತ ಹಾಗೂ ಕಲಾವಿದ ಕೂನಿಕೆರೆಮಾರುತೇಶ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರಲ್ಲದೆ, ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
