April 15, 2026
0000005

ಹಿರಿಯೂರು :    

ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್.ಪಿ.ಜಿ ಸಿಲಿಂಡರ್ ಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಸಂಗತಿ ತಾಲ್ಲೂಕಿನ ಜನರಲ್ಲಿ ಆತಂಕ ಸೃಷ್ಟಿಸಿದ್ದು, ತಾಲ್ಲೂಕಿನ ಗ್ರಾಮೀಣ ಭಾಗದ ಜನರು ಸೇರಿದಂತೆ ನಗರದ ನಾಗರೀಕರು ಗ್ಯಾಸ್ ಸಿಲಿಂಡರ್ ಕಚೇರಿ ಬಳಿ ಮುಂಜಾನೆಯಿಂದಲೇ ಸಿಲಿಂಡರ್ ಪಡೆಯಲು ಮುಗಿಬಿದ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಗಳ ಸುಗಮ ಪೂರೈಕೆಗೆ ಅಗತ್ಯ ಕ್ರಮವಹಿಸಿದ್ದು, ಎಲ್‌.ಪಿ.ಜಿ. ಸಿಲಿಂಡರ್ ಗಳ ಕೊರತೆಯ ಬಗ್ಗೆ ಹರಡುತ್ತಿರುವ ಯಾವುದೇ ಒದಂತಿಗಳಿಗೆ ಸಾರ್ವಜನಿಕರು ಕಿವಿ ಕೊಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರವು ಪ್ರಮುಖ ತೈಲ ಕಂಪನಿಗಳಾದ ಐಒಸಿ, ಬಿಪಿಸಿ ಮತ್ತು ಎಚ್.ಪಿ.ಸಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು. ರಾಜ್ಯದಾದ್ಯಂತ ಎಲ್‌.ಪಿ.ಜಿ ಸಿಲಿಂಡರ್ ಗಳ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಮತ್ತು ಮುಂಬರುವ ದಿನಗಳಿಗೂ ಸರಿಹೊಂದುವಷ್ಟು ಸಾಕಷ್ಟು ದಾಸ್ತಾನು ಲಭ್ಯವಿದೆ ಎಂಬುದಾಗಿ ತೈಲ ಕಂಪನಿಗಳು ದೃಢಪಡಿಸಿವೆ.

ಸಾರ್ವಜನಿಕರು ಹಾಗೂ ಹೋಟೆಲ್ ನವರು ಸಿಲಿಂಡರ್ ಗಳ ಕೊರತೆ ಆಗಬಹುದು ಎಂಬ ಆತಂಕದಿಂದ ಅನಗತ್ಯವಾಗಿ ಸಿಲಿಂಡರ್ ಗಳನ್ನು ಮುಂಗಡವಾಗಿ ಬುಕ್ ಮಾಡುವುದು ಅಥವಾ ಸಂಗ್ರಹಿಸಿಡುವುದನ್ನು ಮಾಡಬಾರದು, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ಸಹಕರಿಸಬೇಕು ಎಂಬುದಾಗಿ ಆಹಾರ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಗತ್ಯ ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕೇಂದ್ರಗಳು ಶಾಲೆಗಳು ಮತ್ತು ಕಾಲೇಜುಗಳ ಬಿಸಿಯೂಟ ಯೋಜನೆಗಳು, ಸರ್ಕಾರಿಸಂಸ್ಥೆಗಳಿಗೆ ಎಲ್‌.ಪಿ.ಜಿ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಸರ್ಕಾರ ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಲಾಗಿದೆ.

ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ಸಂಗ್ರಹಿಸಿರುವುದು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಥವಾ ರಿಫಿಲ್ ರಿಫೀಲ್ಲಿಂಗ್ ದಂಧೆಯಲ್ಲಿ ತೊಡಗುವುದು ಕಂಡು ಬಂದಲ್ಲಿ ಅಗತ್ಯ ವಸ್ತುಗಳ ಕಾಯಿದೆ ಎಲ್‌.ಪಿ.ಜಿ ಕಂಟ್ರೋಲ್ ಆರ್ಡರ್ ಮತ್ತು ಪೆಟ್ರೋಲಿಯಂ ಪ್ರಾಡಕ್ಟ್ 1999ರ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.

About The Author

Leave a Reply

Your email address will not be published. Required fields are marked *