
ಹಿರಿಯೂರು:
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂಬುದಾಗಿ ರೈತ ಮುಖಂಡರು ಆಗ್ರಹಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಿದ್ದೇಶ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಮಾರ್ಚ್ 2ರಿಂದ6ರವರೆಗೆ ಚಿತ್ರದುರ್ಗದ ಜಿಲ್ಲಾಧಿಕಾರಿ ಆವರಣದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಎಂದರಲ್ಲದೆ,
ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜಿಲ್ಲೆಯ ಯಾವ ಶಾಸಕರೂ ಬಂದು ಉಪವಾಸ ನಿರತರ ಜೊತೆ ಮಾತುಕತೆ ನಡೆಸುವ ಪ್ರಯತ್ನ ನಡೆಸಲಿಲ್ಲ. ಇದು ರೈತರ ಬಗ್ಗೆ ಇರುವ ಉದಾಸೀನತೆಯನ್ನು ನೀರಾವರಿ ವಿಚಾರದಲ್ಲಿ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಹೋರಾತ್ರಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಕೆ.ಟಿ.ತಿಪ್ಪೇಸ್ವಾಮಿ ಮಾರ್ಚ್ 6ರಂದು ಉಪವಾಸ ಕೊನೆಗೊಳಿಸಿ ಮನೆಗೆ ತೆರಳಿದ್ದ ನಂತರ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ತಿಪ್ಪೇಸ್ವಾಮಿ ಅವರ ಸ್ಥಿತಿಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹಾಗೂ ಶಾಸಕರೇ ನೇರ ಕಾರಣ. ಅವರ ಆಸ್ಪತ್ರೆ ಖರ್ಚನ್ನು ಸರ್ಕಾರದಿಂದ ಭರಿಸಿಕೊಡಬೇಕು. ಇಲ್ಲವಾದಲ್ಲಿ ಮತ್ತೊಂದು ಸುದೀರ್ಘ ಹೋರಾಟ ಆರಂಭಿಸಬೇಕಾಗುತ್ತದೆ ಎಂಬುದಾಗಿ ಸಂಘದ ಗೌರವಾಧ್ಯಕ್ಷರಾದ ಆಲೂರುಸಿದ್ಧರಾಮಣ್ಣ, ಅಧ್ಯಕ್ಷ ಬಳಗಟ್ಟವೆಂಕಟೇಶ್ ಅವರು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಗೌಡನಹಳ್ಳಿ ಸಿದ್ಧಮ್ಮ, ಪವಿತ್ರಮ್ಮ, ಸುಮಿತ್ರಮ್ಮ, ಓಂಕಾರಮ್ಮ, ದ್ಯಾಮಕ್ಕ, ಉಮಾದೇವಿ, ಗೌರಮ್ಮ, ಕಲ್ಲಮ್ಮ,ಅಂಬಿಕಾ, ಅರಳಿಕೆರೆತಿಪ್ಪೇಸ್ವಾಮಿ, ರಂಗಸ್ವಾಮಿ, ತಿಮ್ಮಾರೆಡ್ಡಿ, ದಿಂಡಾವರಸಣ್ಣತಿಮ್ಮಣ್ಣ, ಸಿಂಪಣ್ಣ, ಮೀಸೆರಾಮಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
