October 27, 2026
0003

ಹಿರಿಯೂರು :

ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದ ನಿವಾಸಿ, ಬರಡಾಗುತ್ತಿರುವ ಬಯಲುಸೀಮೆ ಮಣ್ಣಿನಲ್ಲಿ ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಯ ಹಸಿರನ್ನು ಉಳಿಸಲು ಶ್ರಮಿಸುತ್ತಿರುವ ಅಪರೂಪದ ಕಥೆಗಾರ ಹಾಗೂ ಸಾಹಿತ್ಯ ಪರಿಚಾರಕ, ಸಾಂಸ್ಕೃತಿಕ ಸಂಘಟಕ ಬಿ.ತಿಪ್ಪಣ್ಣಮರಿಕುಂಟೆ ಅವರಿಗೆ ಕರ್ನಾಟಕ ಸರ್ಕಾರ ಕೊಡ ಮಾಡುವ 2026 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ಒಲಿದು ಬಂದಿದೆ.

ಸುಮಾರು 1951ರ ಜನವರಿ 1 ರಂದು ಭೋಜಣ್ಣ ಮತ್ತು ರಾಜಮ್ಮ ದಂಪತಿಗಳ ಪುತ್ರರಾಗಿ ದೇವರಮರಿಕುಂಟೆ ಗ್ರಾಮದಲ್ಲಿ ಜನಿಸಿದ ತಿಪ್ಪಣ್ಣ ದೇವರಮರಿಕುಂಟೆ ರವರು ಬಾಲ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಕಲಿತು, ನಂತರ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಆರಂಭದಲ್ಲಿ ಕಥೆ ಬರೆಯುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡ ಇವರು 1977ರಲ್ಲಿ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ಸ್ಥಾಪಿಸುವ ಮೂಲಕ ಗಡಿಭಾಗದ ಗ್ರಾಮದಲ್ಲಿ ಸಾಹಿತ್ಯದ ಪರಿಮಳವನ್ನು ಸೂಸಲು ಸಾಹಿತ್ಯಾಸಕ್ತರೊಂದಿಗೆ ಟೊಂಕಕಟ್ಟಿ ನಿಂತಿರುವಂತಹ ಮಹಾನ್ ಚೇತನ.

ತಿಪ್ಪಣ್ಣಮರಿಕುಂಟೆ ಅವರು 75ರ ವಯಸ್ಸಿನಲ್ಲೂ ತನ್ನ ಕ್ರಿಯಾಶೀಲ ಚಟುವಟಿಕೆಗಳಿಂದಲೇ ಇಂದಿಗೂ ಪಾದರಸದಂತೆ ಓಡಾಡುತ್ತಿದ್ದು, ಸಮುದಾಯಗಳ ಬದುಕು ಹಳ್ಳಿಗಳ ಕಟು ಸತ್ಯಗಳು ಮತ್ತು ನಮ್ಮ ಕನ್ನಡದ ಮಹಾಕಾವ್ಯಗಳ ಆಶಯವನ್ನು ಆಧುನಿಕ ಜಗತ್ತಿಗೆ ದಾಟಿಸುವ ಇವರ ಕಳಕಳಿ ನಾಡಿನ ಪತ್ರಿಕೋದ್ಯಮ ಹಾಗೂ ಸಾಹಿತ್ಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ.

ಕಥೆಗಾರರಾಗಿ ಗುರುತಿಸಿಕೊಂಡಿರುವ ಇವರು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ, ಮೇಲುದುರ್ಗ ವಾರಪತ್ರಿಕೆ ಹಾಗೂ “ನಿಮಗೊಂದು ವನಸುಮ” ಎಂಬ ದಿನಪತ್ರಿಕೆ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ, ಸುಮಾರು 12 ಪುಸ್ತಕಗಳನ್ನು ಬರೆದಿರುವ ಇವರು ಕಳೆದ 5-6 ವರ್ಷಗಳ ಹಿಂದೆ ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಅಂಬೇಡ್ಕರ್ ಅಧ್ಯಯನದ ಕುರಿತು ಡಿಪ್ಲೋಮೋ ಹಾಗೂ ಇಂದಿರಾಗಾಂಧಿ ವಿಶ್ವವಿದ್ಯಾನಿಲಯದಿಂದ ಗ್ರಾಮೀಣ ಅಭಿವೃದ್ಧಿ ಕುರಿತು ಡಿಪ್ಲೋಮಾ ಪದವಿ ಪಡೆದಿದ್ದಾರೆ.

ಕೇವಲ ಸಾಹಿತಿಯಾಗಿ ಬರಹಗಾರರಾಗಿ ಉಳಿಯದೆ ಒಬ್ಬ ಕ್ರಿಯಾಶೀಲ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ಇವರಿಗೆ ತಾಲೂಕು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳನದಂತಹ ಅಧ್ಯಕ್ಷ ಸ್ಥಾನವು ಒಲಿದಿದೆ. ಇದೀಗ ರಾಜ್ಯ ಸರ್ಕಾರ ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಮಾಡಿರುವುದು ತಿಪ್ಪಣ್ಣ ಅವರ ಸಾಹಿತ್ಯ ಪರಿಚಾರಿಕೆಗೆ ಸಿಕ್ಕ ಗೌರವವಾಗಿದೆ.

About The Author

Leave a Reply

Your email address will not be published. Required fields are marked *