
ಹಿರಿಯೂರು :
ನಗರದ ಶ್ರೀಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರ ಸಂಘವು 25 ನೇ ವರ್ಷದ ರಜತ ಮಹೋತ್ಸವದ ಸಂಭ್ರಮದಲ್ಲಿದೆ, ಸಹಕಾರಿಯ ಅಭಿವೃದ್ಧಿಗೆ ಆರಂಭದಿಂದಲೂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳ ಪರಿಶ್ರಮ ಮತ್ತು ಠೇವಣಿದಾರರು ಸಾಲಗಾರರು ಷೇರುದಾರರ ಸಹಕಾರವೇ ಕಾರಣವಾಗಿದೆ ಎಂಬುದಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ನಂಜನಗೌಡ ಶ್ಲಾಘಿಸಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಕನ್ಯಾಕ ಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಸಾಲ ಪಡೆದವರು ಸಾಹುಕಾರರ ಮನೆಯಲ್ಲಿ ಜೀತದಾಳಾಗಿ ಕೆಲಸ ಮಾಡಬೇಕಿತ್ತು, ಸಹಕಾರ ಕ್ಷೇತ್ರ ಆರಂಭವಾದ ಮೇಲೆ ಅಂತಹ ಅನಿಷ್ಠ ಪದ್ಧತಿ ತೊಲಗಿ ಬಡವರ ಏಳಿಗೆಯಾಗ ತೊಡಗಿತು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸಹಕಾರಿ ಕ್ಷೇತ್ರ ಬಡವರ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಾ ಬಂದಿದೆ ಸಮಾಜದ ಉದ್ದಾರಕ್ಕಾಗಿ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂಬುದಾಗಿ ಅವರು ಹೇಳಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ವಿದ್ಯಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ವಿ.ಅಮರೇಶ್ ಮಾತನಾಡಿ, ನಮ್ಮ ಸಹಕಾರಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಮಟ್ಟದಲ್ಲಿ ಉತ್ತಮ ಸಂಸ್ಥೆ ಎಂಬ ಹೆಸರು ಗಳಿಸಿದೆ, 2025-26 ನೇ ಸಾಲಿನಲ್ಲಿ 94 ಲಕ್ಷ ರೂಗಳ ಲಾಭಗಳಿಸಿದ್ದು, ಷೇರುದಾರರಿಗೆ ಶೇಕಡ 24 ಲಾಭಾಂಶ ನೀಡಲಾಗುತ್ತಿದೆ. ಬ್ಯಾಂಕಿನ ಮೇಲೆ ನಂಬಿಕೆ ಇಟ್ಟು ಠೇವಣಿದಾರರು ಹಣ ತೊಡಗಿಸುತ್ತಿದ್ದು, ಅದಕ್ಕೆ ಸಂಘವೂ ಸ್ಪಂದಿಸುತ್ತಿದೆ ಮುಂದಿನ ದಿನಗಳಲ್ಲಿ ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಸಾಲ ಕೊಡುವ ಯೋಜನೆ ರೂಪಿಸಲಾಗುವುದು ಎಂಬುದಾಗಿ ಹೇಳಿದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಳೆದ 25 ವರ್ಷಗಳಿಂದ ಶ್ರೀ ಕನ್ಯಕಾ ಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ಸಂಘದ ಠೇವಣಿದಾರರು, ಪದಾಧಿಕಾರಿಗಳು, ಷೇರುದಾರರು, ಹಾಗೂ ಸಿಬ್ಬಂದಿವರ್ಗದವರ ಸಹಕಾರದಿಂದ ಇದೀಗ 25 ವರ್ಷಗಳನ್ನು ಪೂರೈಸಿ, ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಸಾಧಿಸಲಿ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ರಘುರಾಮರೆಡ್ಡಿ ಚಿತ್ರದುರ್ಗ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ತಿಪ್ಪೇಸ್ವಾಮಿ ಕಾಂಗ್ರೆಸ್ ಮುಖಂಡ ಸುಹಾಸ್ ಸಂಘ ಸಂಘದ ಮಾಜಿ ಅಧ್ಯಕ್ಷ ಎಚ್ಎಸ್ ಪ್ರಶಾಂತ್ ಇತರರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎನ್.ತಿಪ್ಪೇಸ್ವಾಮಿ ವಹಿಸಿದ್ದರು. ಸಲಹಾ ಸಮಿತಿ ಸದಸ್ಯ ಆರ್.ಪ್ರಕಾಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.]
ಈ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಎಸ್.ಹರ್ಷ, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ಎಲ್.ಆನಂದಶೆಟ್ಟಿ, ಅಧ್ಯಕ್ಷ ಕೆ.ವಿ.ಸತ್ಯನಾರಾಯಣ, ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಜಗದೀಶ್, ಸಹಕಾರಿಯ ಮಾಜಿ ಅಧ್ಯಕ್ಷ ಈ.ಆರ್.ರಮೇಶ್ ಬಾಬು, ನಿರ್ದೇಶಕರಾದ ಆರ್.ಅನಂತಕುಮಾರ್, ಪಿ.ವಿ.ನಾಗರಾಜ್, ಶ್ರೀನಿವಾಸಶೆಟ್ಟಿ, ಹೆಚ್.ಎಸ್.ಮಂಜುನಾಥ್, ಅರುಣ್ ಕುಮಾರ್, ನವೀನ್, ಆಂಜನೇಯಅರಳಿಕಟ್ಟೆ, ತಿಪ್ಪೇರುದ್ರಣ್ಣ, ಮಧುಸೂಧನ್, ಜೆ.ಬಿ.ಮಂಜುನಾಥ್, ಎನ್.ಆರ್.ಜಯಲಕ್ಷ್ಮಿ, ಟಿ.ಲತಾ, ಹಿಂದಿನ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ವ್ಯವಸ್ಥಾಪಕರಾದ ರಾಮಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
