
ಹಿರಿಯೂರು :
ನಗರದ ವಾರ್ಡ್ ನಂಬರ್ 8ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರಿನಲ್ಲಿ ಗಲೀಜು ನೀರು ಮಿಶ್ರಣವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ‘ಅಮೃತ್ 2.0’ ಯೋಜನೆಯಡಿ ನೂತನ ಪೈಪ್ಲೈನ್ ಅಳವಡಿಕೆ ಕಾಮಗಾರಿಯನ್ನು ಭರದಿಂದ ಕೈಗೆತ್ತಿಕೊಳ್ಳಲಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ತಂಡದೊಂದಿಗೆ ವಾರ್ಡ್ಗೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರಲ್ಲದೆ, ಸ್ಥಳ ಪರಿಶೀಲನೆ ನಡೆಸಿದರು.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಪೈಪ್ಲೈನ್ ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಮತ್ತು ಸಿಬ್ಬಂದಿಗಳಿಗೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಾಟರ್ ಬೋರ್ಡ್ ಎ.ಇ.ಇ.ಶ್ರೀಮತಿ ಕುಸುಮ, ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿವರ್ಗದವರು ಹಾಗೂ ನಾಗರೀಕರು ಉಪಸ್ಥಿತರಿದ್ದರು.
