
ಹಿರಿಯೂರು :
ನಾಗರಪಂಚಮಿಯ ಹೆಸರಿನಲ್ಲಿ ಹುತ್ತಕ್ಕೆ ಹಾಲು ಹಾಕುವುದರಿಂದ ಅದರಲ್ಲಿರುವ ಹಾವುಗಳ ಶ್ವಾಸಕೋಶಕ್ಕೆ ಹಾನಿಯಾಗಿ ಪ್ರಾಣಾಪಾಯ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಮೂಢನಂಬಿಕೆಯಿಂದ ಹೊರಬಂದು ಪ್ರಾಣಿಹಿಂಸೆ ಮಾಡುವ ಬದಲು ಹಾಲನ್ನು ಹಸಿದ ಮಕ್ಕಳಿಗೆ ಹಿರಿಯರಿಗೆ ಕುಡಿಯಲು ಕೊಡಬೇಕು ಎಂಬುದಾಗಿ ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷರಾದ ಹೆಚ್.ಎಸ್. ಮಾರುತೇಶ ಕೂನಿಕೆರೆ ಹೇಳಿದರು.

ತಾಲೂಕಿನ ಭೀಮನಬಂಡೆ ಶ್ರೀಶುಭೋದಯ ವೃದ್ಧಾಶ್ರಮದಲ್ಲಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರಪಂಚಮಿಯನ್ನು ಬಸವಪಂಚಮಿಯಾಗಿ ಆಚರಿಸುವಂತೆ ಆಶ್ರಮವಾಸಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಆಶ್ರಮವಾಸಿಗಳಿಗೆ ಹಾಲು ವಿತರಿಸಿ, ಅವರು ಮಾತನಾಡಿದರು.

ಜಗಜ್ಯೋತಿ ಬಸವಣ್ಣನವರ ‘ದಯವೇ ಧರ್ಮದ ಮೂಲವಯ್ಯ’ ಎಂಬ ಸಿದ್ಧಾಂತದಂತೆ ಪ್ರತಿಯೊಬ್ಬರೂ ಪ್ರಕೃತಿ ರಕ್ಷಣೆ, ಜೀವದಯೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ವೃದ್ಧಾಶ್ರಮ, ಅನಾಥಶ್ರಮಗಳ ಮಕ್ಕಳಿಗೆ, ಹಿರಿಯರಿಗೆ ಹಾಲುಕೊಟ್ಟರೆ ಅವರ ಹಸಿವು ನೀಗಿಸಿದಂತಾಗುತ್ತದೆ ಎಂಬುದಾಗಿ ಹೇಳಿದರು.

ಈಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ, ಶ್ರೀಶುಭೋದಯ ವೃದ್ಧಾಶ್ರಮದ ಮುಖ್ಯಸ್ಥರು ಹಾಗೂ ವೃದ್ಧರುಗಳು ಉಪಸ್ಥಿತರಿದ್ದರು.
