September 13, 2026
00001

ಹಿರಿಯೂರು :

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ದುಶ್ಚಟಗಳಿಂದ ಹೊರಬರಲು ಸಂಗೀತ, ಕ್ರೀಡೆ, ಯೋಗಾಭ್ಯಾಸಗಳು ಸಹಕಾರಿಯಾಗಲಿದ್ದು, ಸಂಗೀತದಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಗೀತ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂಬುದಾಗಿ ಸಂಗೀತ ವಿದ್ವಾನ್ ಆರ್.ತಿಪ್ಪೇಸ್ವಾಮಿ ಹೇಳಿದರು.  ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಸಮಾಜದಲ್ಲಿ ಯುವಕರ ಪಾತ್ರ” ಕುರಿತ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ದುಶ್ಚಟಗಳಿಗೆ ದಾಸರಾದರೆ ಕುಟುಂಬದ ಬಗ್ಗೆ, ಸಮಾಜದ ಬಗ್ಗೆ, ದೇಶದ ಬಗ್ಗೆ ಯಾವುದೇ ಕಾಳಜಿ ಇರುವುದಿಲ್ಲ, ಮಾದಕ ವಸ್ತುಗಳ ವ್ಯಾಮೋಹಕ್ಕೆ ಒಳಗಾದ ವ್ಯಕ್ತಿ ತಪ್ಪುದಾರಿಯಲ್ಲಿ ನಡೆಯಬಹುದಾದ ಸಾಧ್ಯತೆಗಳಿದ್ದು, ಇಂದಿನ ಯುವಜನತೆ ಇಂತಹ ದುಶ್ಚಟಗಳಿಂದ ಹೊರಬಂದು ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ವಿ.ಚಂದ್ರಶೇಖರ್ ಮಾತನಾಡಿ, ಭವಿಷ್ಯದ ಬದುಕನ್ನು ಉಜ್ವಲವಾಗಿಸಿಕೊಳ್ಳಲು ವಿದ್ಯಾರ್ಥಿ ವೇತನವನ್ನು ಮೆಟ್ಟಿಲು ಮಾಡಿಕೊಳ್ಳಬೇಕು, ಇಲ್ಲಿ ಎಡವಿದರೆ ಬದುಕಿನಲ್ಲಿ ಮತ್ತೆ ಮೇಲೇಳುವ ಅವಕಾಶಗಳೇ ಸಿಗುವುದಿಲ್ಲ, ಒಳಿತು ಕೆಡಕುಗಳ ಆಲೋಚಿಸಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಮುನ್ನಡೆಯಬೇಕು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ “ಸಮಾಜದಲ್ಲಿ ಯುವಕರ ಪಾತ್ರ” ಎಂಬುದರ ಬಗ್ಗೆ ವಿಷಯ ಮಂಡಿಸಿದ ಟಿ.ಕೋಮಲ ಪ್ರಥಮ, ರೋಹಿತ್ ದ್ವಿತೀಯ, ಮಧು ತೃತೀಯ ಬಹುಮಾನವನ್ನು ಪಡೆದರು.

ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಜಗದಾಂಬ, ಹಾಗೂ ರಮಾ ಭಕ್ತಿಗೀತೆಗಳನ್ನು ಹಾಡಿದರು. ಕಾಲೇಜಿನ ರಿಜಿಸ್ಟಾರ್ ಎಂ.ಪಿ.ಸೀನಪ್ಪ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಎನ್.ಶಿವರಾಜ್, ಎಂ.ರವೀಂದ್ರನಾಥ್, ತೀರ್ಪುಗಾರರಾದ ಬಸವರಾಜ್, ರೋಹಿಣಿ, ರಾಘವೇಂದ್ರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *