August 7, 2026
00007

ಹಿರಿಯೂರು :

ತಾಲ್ಲೂಕಿನ ಬಾಲದೇವರಹಟ್ಟಿ ಗ್ರಾಮದ ಪುರಾತನ ಪ್ರಸಿದ್ಧವಾದ ಅಗಸರಕಟ್ಟೆ ಕೆರೆ ಇಂದು ನಿರ್ಲಕ್ಷ್ಯ ಹಾಗೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಬತ್ತಿ ಹೋಗುವ ಸ್ಥಿತಿಗೆ ತಲುಪಿದೆ ಎಂಬುದಾಗಿ ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಈ ಅಗಸರಕಟ್ಟೆ ಕೆರೆಯನ್ನು ಅವಲಂಬಿಸಿ, ಈ ಗ್ರಾಮದ ರೈತರು ತಮ್ಮ ಹೊಲಗಳಲ್ಲಿ ಸಮೃದ್ಧ ಕೃಷಿ ನಡೆಸುತ್ತಿದ್ದರು. ಕುರಿ, ಹಸು, ಎಮ್ಮೆ ಸೇರಿದಂತೆ ನೂರಾರು ಜಾನುವಾರುಗಳಿಗೆ ಇದೇ ಪ್ರಮುಖ ನೀರಿನ ಮೂಲವಾಗಿತ್ತು ಎನ್ನಲಾಗಿದೆ.

ಜಲಚರ ಪ್ರಾಣಿಗಳಾದ ಮೀನು, ಏಡಿ, ಕಪ್ಪೆ ಹಾಗೂ ಹಂಸಗಳ ಆಶ್ರಯ ತಾಣವಾಗಿದ್ದ ಈ ಕೆರೆ ಜೀವ ವೈವಿಧ್ಯದ ನೆಲೆಯಾಗಿತ್ತು. ಕಪ್ಪೆಗಳ ಕಲರವ ಮತ್ತು ಹಕ್ಕಿಗಳ ಸಂಚಾರದಿಂದ ಕೆರೆಯ ಪರಿಸರ ಸದಾ ನಿಸರ್ಗ ಸೊಬಗಿನಿಂದ ಕಂಗೊಳಿಸುತ್ತಾ ಹಚ್ಚಹಸುರಿನ ಪರಿಸರ ನಿರ್ಮಾಣ ಮಾಡಿತ್ತು.

ಈ ಗ್ರಾಮದ ಹಿರಿಯರು ಹೇಳುವ ಪ್ರಕಾರ, ಅಂದಿನ ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಬಟ್ಟೆ ಒಗೆಯುವ ಅಗಸರು ಈ ಕೆರೆಯಲ್ಲಿ ಬಟ್ಟೆ ತೊಳೆಯಲು ಬಳಸುತ್ತಲಿದ್ದ ಕಾರಣಕ್ಕೆ ಈ ಕೆರೆಗೆ “ಅಗಸರಕಟ್ಟೆ” ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಕಾಲದಲ್ಲಿ ಮಳೆಯಿಲ್ಲದೆ ಈ ಕೆರೆ ಬತ್ತುತ್ತಿರುವುದರಿಂದ ರೈತರು, ಜಾನುವಾರುಗಳು ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೆರೆಯನ್ನು ಪುನರುಜ್ಜೀವನಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಗ್ರಾಮಸ್ಥರು ಸಂಬಂಧಪಟ್ಟವರಿಗೆ ಒತ್ತಾಯಿಸಿದ್ದಾರೆ.

ವರದಿ : ದಿನೇಶ್ ಎಂ.ಬಾಲದೇವರಹಟ್ಟಿ

About The Author

Leave a Reply

Your email address will not be published. Required fields are marked *