August 1, 2026
000001

ಹಿರಿಯೂರು :    

ತ್ರಿಕಾಲ ಲಿಂಗ ಪೂಜಾ ನಿಷ್ಠೆಯನ್ನು ಬೆಳೆಸಿಕೊಂಡಿದ್ದ ಶ್ರೀಮಹಾಂತ ಶಿವಯೋಗಿ ಸ್ವಾಮೀಜಿಯವರು ಸಮಾಜದಲ್ಲಿ ವ್ಯಸನ ಮುಕ್ತತೆಯನ್ನು ಉತ್ತೇಜಿಸಲು ಶ್ರಮಿಸಿದ ಮಹಾನ್ ಸಂತರಾಗಿದ್ದು, ಅವರು ಭಕ್ತರ ಬಾಳಿನ ಬೆಳಕಾಗಿದ್ದರು, ಅವರ ಜನ್ಮ ದಿನವಾದ ಆಗಸ್ಟ್ 1 ಅನ್ನು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಎಂ.ಸಿದ್ದೇಶ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಹಾಂತ ಶಿವಯೋಗಿ ಸ್ವಾಮೀಜಿಯವರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ನಿವೃತ್ತ ಉಪನ್ಯಾಸಕರಾದ ಟಿ.ಶಿವಪ್ರಸಾದ್ ಮಾತನಾಡಿ, ಶ್ರೀಮಹಾಂತ ಶಿವಯೋಗಿ ಸ್ವಾಮೀಜಿಯವರು ನಾಡಿನ ಖ್ಯಾತ ವೈದ್ಯರು, ಸಾಹಿತಿಗಳು ಮತ್ತು ಧರ್ಮಗುರುಗಳನ್ನು ಆಹ್ವಾನಿಸಿ, ಅವರಿಂದ ಉಪನ್ಯಾಸ ಕೊಡಿಸುವ ಮೂಲಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು, ವ್ಯಸನಮುಕ್ತ ವ್ಯಕ್ತಿ, ಕುಟುಂಬ, ಸಮಾಜ ಮತ್ತು ಗ್ರಾಮಗಳನ್ನು ನಿರ್ಮಿಸುವ ಗುರಿ ಹೊಂದಿದ್ದ ಅವರು ಈ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರು ವ್ಯಸನಗಳಿಂದ ಮುಕ್ತರಾದರು ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀಮಹಾಂತ ಶಿವಯೋಗಿ ಸ್ವಾಮೀಜಿಯವರ ಜಯಂತ್ಯೋತ್ಸವದ ಅಂಗವಾಗಿ ನಗರದ ತಾಲ್ಲೂಕು ಕಚೇರಿಯಿಂದ ಆರಂಭಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮಾದಕ ವ್ಯಸನದಿಂದಾಗುವ ದುಷ್ಟರಿಣಾಮಗಳ ಕುರಿತಂತೆ ಘೋಷಣೆ ಕೂಗುತ್ತಾ ಜನಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಇಸಿಓ ಪುಟ್ಟರಾಜು, ಪೋಲೀಸ್ ಇಲಾಖೆ ವೆಂಕಟೇಶ್, ಕೃಷಿ ನಿರ್ದೇಶಕರಾದ ಅಶೋಕ್, ಬಿ.ಸಿ.ಎಂ.ಇಲಾಖೆ ಶ್ರೀದೇವಿ, ಸಮಾಜ ಕಲ್ಯಾಣ ಇಲಾಖೆ ಸುರೇಶ್ ನಾಯ್ಕ, ಮಹಿಳಾ ಮತ್ತು ಮಕ್ಕಳ ಇಲಾಖೆ ರಾಜೇಶ್ವರಿ, ಕಂದಾಯ ಇಲಾಖೆ ಶ್ರೀನಿವಾಸ್ ರೆಡ್ಡಿ, ಎಸ್.ಎನ್.ಮಮಂಜುನಾಥ್ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.  

About The Author

Leave a Reply

Your email address will not be published. Required fields are marked *