August 1, 2026
0001

ಹಿರಿಯೂರು :

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಅಂತರ್ಜಲ ಸಂಪೂರ್ಣವಾಗಿ ಖುಷಿದು ಕೊಳವೆ ಬಾವಿಗಳಲ್ಲಿ ನೀರು ಬಾರದೆ ರೈತರು ಕಂಗಾಲಾಗಿದ್ದಾರೆ, ಸರ್ಕಾರ ಈ ಕೂಡಲೇ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡಬೇಕು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಬಿ.ಓ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ, ನಂತರ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ರೈತರು ತಾವು ಬೆಳೆದ ತೋಟಗಾರಿಕೆ ಹಾಗೂ ಅಲ್ಪಾವಧಿ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರತಿದಿನ ರೈತರು ನೂರಾರು ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದು, ಕೊರೆದ ಬಾವಿಗಳಲ್ಲಿ ನೀರು ಬಾರದೆ ರೈತರು ಲಕ್ಷಾಂತರ ರೂಗಳ ನಷ್ಟವನ್ನು ಅನುಭವಿಸಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಕಳೆದ ಸುಮಾರು ಐದು-ಆರು ತಿಂಗಳುಗಳಿಂದ ರೈತರು ತಾವು ಬೆಳೆದ ಒಣಗುತ್ತಿರುವ ತೋಟಗಾರಿಕೆ ಬೆಳೆ, ಉಳಿಸಿಕೊಳ್ಳಲು ಲಾರಿ ಮತ್ತು ಟ್ರ್ಯಾಕ್ಟರ್ ಗಳ ಟ್ಯಾಂಕರ್ ಮುಖಾಂತರ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಬೆಳೆಗಳಿಗೆ ಹಾಯಿಸುತ್ತಿದ್ದರೂ ಬೆಳೆ ಕಾಪಾಡಿಕೊಳ್ಳುವುದು ಕಷ್ಟಕರವಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಕೆರೆಕಟ್ಟೆಗಳು ಒಣಗಿ ಅಂತರ್ಜಲ ಸಂಪೂರ್ಣ ಪಾತಾಳ ಸೇರಿರುತ್ತದೆ.

ಜನ ಜಾನುವಾರು ಪ್ರಾಣಿ,ಪಕ್ಷಿಗಳು ಜಲಚರ ಪ್ರಾಣಿಗಳಿಗೂ ಸಹ ನೀರಿಲ್ಲದೆ ತೀವ್ರ ಸಂಕಷ್ಟಕ್ಕಿಡಾಗಿವೆ ಅನೇಕ ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಜಿಲ್ಲಾಡಳಿತ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದೆ, ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಅತಿ ಕಡಿಮೆ ಇದೆ, ತಾಲೂಕಿನಲ್ಲಿ ಕೇವಲ ಶೇ 10ರಷ್ಟು ಬಿತ್ತನೆಯಾಗಿದ್ದು ಈ ತಿಂಗಳಲ್ಲಿ ಕೇವಲ 3ಮಿ.ಮೀ ಮಳೆಯಾಗಿ, ಶೇ.89ಮಿ.ಮೀ ಕೊರತೆಯಾಗಿದೆ. 

ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಚಿವರು ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಸರ್ಕಾರ ಮತ್ತು ಜನಪ್ರತಿನಿಧಿಗಳು ಮತ್ತು ಜಿಲ್ಲೆಯ ಅಧಿಕಾರಿಗಳು ಸಮೀಕ್ಷೆ ಮಾಡದೆ, ಬಿತ್ತನೆ ಮಾಡಿರುವ ಎಲ್ಲಾ ರೈತರ ಜಮೀನುಗಳಿಗೆ ಭೇಟಿನೀಡಿ, ವಾಸ್ತವವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಬೆಳೆನಷ್ಟ ಅನುಭವಿಸುತ್ತಿರುವ ಎಲ್ಲ ರೈತರಿಗೂ ಪ್ರತಿ ಎಕರೆ ಒಂದಕ್ಕೆ ಕನಿಷ್ಠ 30ಸಾವಿರ ರೂಗಳು ಕಡಿಮೆಯಾಗದಂತೆ ಬೆಳೆ ಪರಿಹಾರ ನೀಡಬೇಕು,

ಅಲ್ಲದೆ, ಬರ ಪರಿಸ್ಥಿತಿ ನಿಭಾಯಿಸಲು ಚಿತ್ರದುರ್ಗ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮತ್ತು ಜಾನುವಾರು ಸಂಪತ್ತನ್ನು ಉಳಿಸಿಕೊಳ್ಳಲು ಮೇವು ಬ್ಯಾಂಕ್ ಗಳನ್ನು ಪ್ರತಿ ಹೋಬಳಿಯಲ್ಲಿ ಸ್ಥಾಪಿಸಿ ಗೋಶಾಲೆ ತೆರೆಯುವಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರ ಪರವಾಗಿ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿಶಿವಕುಮಾರ್ ಮಾತನಾಡಿ, ತಾಲೂಕಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತಿದ ಎಲ್ಲಾ ಬೆಳೆಗಳು ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಕಂದಾಯ ಕೃಷಿ ಮತ್ತು ಬೆಳೆವಿಮೆ ಪ್ರತಿನಿಧಿಗಳು ಬೆಳೆವಿಮೆ ಪಾವತಿಸಿರುವ ಎಲ್ಲಾ ರೈತರ ಜಮೀನುಗಳಿಗೆ ಭೇಟಿನೀಡಿ ಸಮೀಕ್ಷೆ ನಡೆಸಿ ಬೆಳೆವಿಮೆ ಪಾವತಿಸಿರುವ ಎಲ್ಲಾ ರೈತರಿಗೂ ನವಂಬರ್ ಒಳಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವಿಮೆ ಪಾವತಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ದಸ್ತಗಿರಿ ಸಾಬ್, ಚೇತನ್ ಯಳನಡು, ಮೇಟಿಕುರ್ಕೆ ತಿಪ್ಪೇಸ್ವಾಮಿ, ಎಂ ಲಕ್ಷ್ಮಿಕಾಂತ್, ಗೌಸ್ ಪೀರ್, ಬಿ ಡಿ ಶ್ರೀನಿವಾಸ್, ಐನಹಳ್ಳಿ ರವೀಶ್, ಉಮಾಪತಿ,ಎಚ್ ಆರ್ ತಿಪ್ಪೇಸ್ವಾಮಿ, ಶಶಿಕಲಾ,  ಶ್ರೀಮತಿ ನಿತ್ಯಶ್ರೀ, ಭಾರತೀಯ ಕಿಸಾನ್ ಸಂಘದ ಮಂಜುನಾಥ್ ಮುಕುಂದಪ್ಪ, ಮರದ ಮುತ್ತು,  ಮುನಿಸ್ವಾಮಿ, ಪುನೀತ್ ಗೌಡ, ಸತ್ಯನಾರಾಯಣ, ಮಂಜಣ್ಣ, ಎಂ ಪಿ ನಾಗರಾಜು, ರಂಗಸ್ವಾಮಿ, ತಿಪ್ಪೇಶ್,  ಗಿರೀಶ್, ಹೆಚ್.ರಂಗಸ್ವಾಮಿ, ಅಜಯ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *