July 28, 2026
0000006

ಹಿರಿಯೂರು :

ತಾಲೂಕಿನಲ್ಲಿ ಇಂಡಿಯನ್ ಗ್ಯಾಸ್ ಏಜೆನ್ಸಿಯ ಮನಸೋಇಚ್ಛೆ ವರ್ತನೆ ಮತ್ತು ಕಿರುಕುಳ ಮಿತಿ ಮೀರಿದ್ದು, ಇದನ್ನು ಕೇಳುವವರೇ ಇಲ್ಲದಂತಾಗಿದೆ. ಗ್ರಾಹಕರಿಂದ ಒಟಿಪಿ ಪಡೆದು ತಿಂಗಳು ಕಳೆದರೂ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡದೆ ಬೇಜವಾಬ್ದಾರಿ ತೋರಲಾಗುತ್ತಿದೆ ಎಂಬುದಾಗಿ ‘ಪವರ್ ಫೋಕಸ್ ನ್ಯೂಸ್’ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಗ್ಯಾಸ್ ಪೂರೈಕೆಯಾಗದೆ ಕಚೇರಿಗೆ ಅಲೆಯುತ್ತಿರುವ ವೃದ್ಧರು, ವಿಕಲಚೇತನರು ಹಾಗೂ ಬಡ ಕುಟುಂಬಗಳ ಮೇಲೆ ಏಜೆನ್ಸಿಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕರ ಈ ಕಷ್ಟ-ಕಾರ್ಪಣ್ಯಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕುಮಟ್ಟದ ಅಧಿಕಾರಿಗಳಿಗೆ ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಉದ್ಭವಿಸಿದೆ.

​ಹಿರಿಯೂರು ತಾಲೂಕಿನಲ್ಲಿ ಪ್ರಸ್ತುತ ಶಾಸಕರಿಲ್ಲದೆ, ಸಂಪೂರ್ಣ ಆಡಳಿತ ಅಧಿಕಾರಿಗಳ ಹಿಡಿತದಲ್ಲಿದೆ. ಆದರೆ ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದು, ತಾಲೂಕಿನ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಈ ಕೂಡಲೇ ಸಂಬಂಧಪಟ್ಟ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ನಿಯಮ ಬಾಹಿರವಾಗಿ ವರ್ತಿಸುತ್ತಿರುವ ಗ್ಯಾಸ್ ಏಜೆನ್ಸಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ತಕ್ಷಣವೇ ಬಾಕಿ ಇರುವ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡಬೇಕೆಂದು ‘ಪವರ್ ಫೋಕಸ್ ನ್ಯೂಸ್’ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *