July 29, 2026
00002

ಹಿರಿಯೂರು :         

ನಗರದ ರೋಟರಿ ಹಾಗೂ ರೆಡ್ ಕ್ರಾಸ್ ನಂತಹ ಸಂಸ್ಥೆಗಳು ಶ್ರೀಅನಿಲ್ ಸುರಾನರವರ ಸಹಾಯ-ಸಹಕಾರದೊಂದಿಗೆ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ನಿಜಕ್ಕೂ ಅತ್ಯುತ್ತಮ ಕಾರ್ಯವಾಗಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು

ನಗರದ ಬಸ್ ನಿಲ್ದಾಣ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರು ಹಾಗೂ ರೋಟರಿ ಸಂಸ್ಥೆ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಅನಿಲ್ ಸುರಾನ ಸಹಾಯಧನದಲ್ಲಿ ಶಾಲಾ ಮಕ್ಕಳಿಗೆ ಶೌಚಾಲಯ ಕಟ್ಟಡ ನಿರ್ಮಾಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್. ಸುಂದರ್ ರಾಜ್ ಮಾತನಾಡಿ,  ಈ ಶಾಲೆ ನಾನು ಓದಿದ ಶಾಲೆ, ಇಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಮಕ್ಕಳಿಗೆ ಶೌಚಾಲಯದ ಅವಶ್ಯಕತೆ ಇದೆ ಎಂಬ ಮುಖ್ಯಶಿಕ್ಷಕರ ಕೋರಿಕೆ ಮೇರೆಗೆ ನಮ್ಮ ಸಂಸ್ಥೆಯಿಂದ ಈ ಕೊಡುಗೆ ನೀಡಲು ಮುಂದಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಿದರು.

ರೋಟರಿ ಸಂಸ್ಥೆ ಅಧ್ಯಕ್ಷರಾದ ಶ್ರೀ ವಸಂತ್ ಕುಮಾರ್ ರವರು ಮಾತನಾಡಿ, ನಾನು ಸಹ ಇದೇ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಹಾಗಾಗಿ ನಾನು ಓದಿದ ಶಾಲೆಗೆ ನಮ್ಮ ಸಂಸ್ಥೆಯಿಂದಲೇ ಕೊಡುಗೆ ನೀಡುತ್ತಿರುವುದು, ನನಗೆ ಸಂತಸ ತಂದಿದೆ, ಉತ್ತಮ ರೀತಿಯಲ್ಲಿ ಇದರ ಬಳಕೆ ಆಗಬೇಕು ಎಂಬುದು ನನ್ನ ಆಸೆಯಾಗಿದೆ ಎಂಬುದಾಗಿ ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀನಿವಾಸ್ ರವರು ಮಾತನಾಡಿ, ಈ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಮಕ್ಕಳ ದಾಖಲಾತಿಯಾಗಿದ್ದು, ಇಲ್ಲಿಗೆ ಅತ್ಯಂತ ಅಗತ್ಯವಾದ ಶೌಚಾಲಯ ಸೌಲಭ್ಯವನ್ನು ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಮಾಡುತ್ತಿವೆ, ಶಾಲಾ ಮಕ್ಕಳು ಇದರ ಸದ್ಭಳಕೆಯನ್ನು ಮಾಡಿಕೊಳ್ಳಬೇಕು ಎಂಬುದಾಗಿ ತಿಳಿಸಿದರು.

ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಅನುಸೂಯಮ್ಮ ಮಾತನಾಡಿ, ನಮ್ಮ ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ರೋಟರಿ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳು ಹಾಗೂ ಶ್ರೀಅನಿಲ್ ಸುರಾನರವರಿಗೆ ನಮ್ಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ತುಂಬುಹೃದಯದ ಧನ್ಯವಾದಗಳು ಎಂಬುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಎ.ರಾಘವೇಂದ್ರ, ದೇವರಾಜ್ ಮೂರ್ತಿ, ಬಿ.ಕೆ.ನಾಗಣ್ಣ, ಸಿ.ಆರ್.ಪಿ ಚರಣ್ ರಾಜ್ ರವರು, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆ ಎಲ್ಲಾ ಪುರುಷ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಶಾಲಾ ಸಿಬ್ಬಂದಿ ವರ್ಗದವರು, ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ಸದಸ್ಯರು, ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *