July 29, 2026
004

ಹಿರಿಯೂರು :

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ, ಐಮಂಗಲ ಹೋಬಳಿಯ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ ಎಂಬುದಾಗಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷರಾದ ಆರ್.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.

ಮೂಲತಃ ಐಮಂಗಲ ಹೋಬಳಿಯ ಗನ್ನಾಯಕನಹಳ್ಳಿಯವನಾದ ನನಗೆ ಹೋಬಳಿಯಲ್ಲಿ ಜನರು ಸೇವಿಸುತ್ತಿರುವ ಕುಡಿಯುವ ನೀರಿನಲ್ಲಿ ಯಥೇಚ್ಛ ಫ್ಲೋರೈಡ್ ಅಂಶ ಇರುವುದು ಗೊತ್ತಿದೆ, ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಇದಾಗಿದ್ದು, ಕೆರೆಗಳು ಇದ್ದರೂ ತುಂಬುವುದು ಅಪರೂಪ ಎನ್ನುವಂತಾಗಿದೆ,

ಆದ್ದರಿಂದ ಭದ್ರಾ ಮೇಲ್ದಂಡೆ ಯೋಜನೆ ಅಡಿ ಹೋಬಳಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ ಎಂಬುದಾಗಿ ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅವಧಿ ಇನ್ನು ಎರಡು ವರ್ಷವಿದ್ದು, ಅಷ್ಟರಲ್ಲಿ ಮೇಟಿಕುರ್ಕೆ ಸಮೀಪ ಪ್ರಗತಿಯಲ್ಲಿರುವ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತೇನೆ, ಕೈಗಾರಿಕೆಗಳು ಆರಂಭವಾದರೆ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ,

ಪ್ರಧಾನಿ ನರೇಂದ್ರಮೋದಿಯವರಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಕಾಂಗ್ರೆಸ್ ನವರು ಸುಳ್ಳು ಭರವಸೆ ನೀಡಿರುವುದಿಲ್ಲ, ಬಡವರು, ಯುವಜನಾಂಗ ಹಾಗೂ ಮಹಿಳೆಯರ ಪರ ನಮ್ಮ ಕಾರ್ಯಕ್ರಮಗಳು ಮುಂದುವರಿಯಲಿವೆ 2028 ರಲ್ಲೂ ಸಹ ಜನರ ಆಶೀರ್ವಾದದಿಂದ ನಮ್ಮ ಪಕ್ಷದ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜಿ.ಧನಂಜಯ ಕುಮಾರ್, ಎಚ್.ಆರ್.ತಿಮ್ಮಯ್ಯ, ಪಿ.ಎಸ್. ಸಾದತ್ ವುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *