

ಹಿರಿಯೂರು :
ಪ್ರಾಣಾಪಾಯದಲ್ಲಿರುವ ರೋಗಿಗಳಿಗೆ ಮರುಜೀವ ನೀಡಿ, ಅವರ ಕಷ್ಟದ ಸಮಯದಲ್ಲಿ ಆಶಾಕಿರಣವಾಗುವ ವೈದ್ಯರು ಭೂಮಿಯ ಮೇಲಿನ ಪ್ರತ್ಯಕ್ಷ ದೇವರುಗಳು ಎಂಬುದಾಗಿ ನಮ್ಮ ಜನ ನಂಬಿದ್ದಾರೆ, ಇದು ಸಾರ್ವಜನಿಕರು ವೈದ್ಯರ ಮೇಲಿಟ್ಟಿರುವ ವಿಶ್ವಾಸ ಹಾಗೂ ನಂಬಿಕೆಯಾಗಿದೆ ಎಂಬುದಾಗಿ ಹಿರಿಯ ಸಾಹಿತಿ ಎಂ.ಜಿ.ರಂಗಸ್ವಾಮಿ ಹೇಳಿದರು.
ನಗರದ ಗಣೇಶ ಮಕ್ಕಳ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ನಿಸ್ವಾರ್ಥ ಸೇವೆ, ಮಾನವೀಯತೆ ಮತ್ತು ತ್ಯಾಗದ ಮೂಲಕ ಅವರು ಸಮಾಜದ ಪಾಲಿಗೆ ದೇವರೆನಿಸಿಕೊಂಡಿದ್ದಾರೆ, ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಬಹುದಾಗಿದೆ ಮನುಷ್ಯನಿಗೆ ಆರೋಗ್ಯ ಸಮಸ್ಯೆಯಿಂದ ಪಾರುಮಾಡಿ ಮರುಜೀವ ನೀಡುವ ಶಕ್ತಿ ವೈದ್ಯರಿಗೆ ಮಾತ್ರ ದೇವರು ದಯಪಾಲಿಸಿದ್ದಾನೆ.

ಈ ನಿಟ್ಟಿನಲ್ಲಿ ತಮ್ಮ ಸ್ವಂತ ಹಿತಾಸಕ್ತಿ, ನಿದ್ರೆ ಮತ್ತು ವಿಶ್ರಾಂತಿಯನ್ನು ಬದಿಗಿಟ್ಟು ರೋಗಿಗಳ ಆರೋಗ್ಯ ಸುಧಾರಣೆಗೆ ಹಗಲಿರುಳು ಶ್ರಮಿಸುವವ ವೈದ್ಯರು ಕಾಯಿಲೆಯ ಚಿಂತೆಯಿಂದ ಬಳಲುವ ರೋಗಿಗಳಿಗೆ ಮತ್ತು ಅವರ ಕುಟುಂಬಕ್ಕೆ ಧೈರ್ಯ ತುಂಬಿ, ಗುಣಮುಖರಾಗುವ ನಂಬಿಕೆಯನ್ನು ಮೂಡಿಸುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ಮಾತನಾಡಿ, ತಮ್ಮ ಕೌಶಲ್ಯ ಮತ್ತು ಮಾನವೀಯತೆಯನ್ನು ಒಂದುಗೂಡಿಸಿಕೊಂಡು ಇತರರ ಆರೋಗ್ಯಕ್ಕಾಗಿ ಶ್ರಮಿಸುವ ವೈದ್ಯರೇ ಸಮಾಜದಲ್ಲಿ ಶ್ರೇಷ್ಠರು ಜೀವ ರಕ್ಷಣೆ ಮತ್ತು ಮರು ಚೈತನ್ಯ ನೀಡುವಿಕೆಯು ಒಂದು ಹೊಸ ಜೀವ ನೀಡುವಿಕೆಯು ವೈದ್ಯರ ಉತ್ತಮ ಕಾರ್ಯವಾಗಿದೆ,
ಯಾವುದೇ ಭೇದಭಾವವಿಲ್ಲದೆ, ಎಲ್ಲ ವರ್ಗದ ಜನರಿಗೂ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಎತ್ತಿಹಿಡಿಯುತ್ತಾರೆ. ನಂಬಿ ಬಂದ ರೋಗಿಗಳಿಗೆ ಅವರಿವರೆನ್ನದೇ ಸೇವೆ ಮಾಡುವ ವೈದ್ಯರು ಭಾವೈಕ್ಯತೆಯ ಪ್ರತೀಕವಾಗಿದ್ದಾರೆ, ಆದ್ದರಿಂದ ವೈದ್ಯರ ದಿನಾಚರಣೆಯಂದು ಈ ವೈದ್ಯರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಗೌರವಿಸಬೇಕಿದೆ ಎಂದರು.
ಮಕ್ಕಳ ತಜ್ಞ ವೈದ್ಯರಾದ ಡಾ.ಎಸ್.ಆರ್.ಮಹಲಿಂಗಪ್ಪ ಮಾತನಾಡಿ, ವೈದ್ಯರ ಈ ಪವಿತ್ರ ವೃತ್ತಿ ಮತ್ತು ನಿಸ್ವಾರ್ಥ ಸೇವೆಗೆ ಪ್ರತಿಯೊಬ್ಬರೂ ಗೌರವವನ್ನು ನೀಡಲೆಂದೇ ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವನ್ನು ಆಚರಿಸಲಾಗುತ್ತದೆ. ಡಾ.ಬಿ.ಸಿ.ರಾಯ್ ಭಾರತದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
ಅವರ ಪ್ರಯತ್ನಗಳು ಇಂದಿಗೂ ಜನಸಂಖ್ಯೆಗೆ ಪ್ರಯೋಜನವನ್ನು ನೀಡುತ್ತಿರುವ ಅನೇಕ ವೈದ್ಯಕೀಯ ಸಂಸ್ಥೆಗಳು ಮತ್ತು ಅಭ್ಯಾಸಗಳಿಗೆ ಅಡಿಪಾಯ ಹಾಕಿವೆ. ಅವರ ವೈದ್ಯಕೀಯ ಸಾಧನೆಗಳನ್ನು ಮೀರಿ, ಡಾ. ರಾಯ್ ಒಬ್ಬ ಸಾಮಾಜಿಕ ಸುಧಾರಕರೂ ಆಗಿದ್ದರು. ಆರೋಗ್ಯ ಸೇವೆಯ ಲಭ್ಯತೆಯನ್ನು ಸುಧಾರಿಸಲು ಅವಿಶ್ರಾಂತವಾಗಿ ಶ್ರಮಿಸಿದರು ಎಂದರಲ್ಲದೆ,
ವೈದ್ಯಕೀಯದ ಬಗೆಗಿನ ತಮ್ಮ ಮಾನವೀಯ ದೃಷ್ಟಿಕೋನದಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದರು.ಈ ದಿನ ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಗೆ ಪ್ರಖ್ಯಾತ ವೈದ್ಯರಾದ ಡಾ.ಬಿ.ಸಿ.ರಾಯ್ ಅವರ ಕೊಡುಗೆಗಳು ಅಪಾರವಾಗಿದೆ, ಆದ್ದರಿಂದ ವೈದ್ಯರ ದಿನಾಚರಣೆಯಂದು ವೈದ್ಯರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರಾದ ರವೀಂದ್ರನಾಥ್, ಸಾಹಿತಿ ಕಿರಣ್ ಮಿರಜ್ಕರ್, ಶುಶ್ರೂಶಕಿ ಚಂದ್ರಕಲಾ, ಎಂಜಲ್ ರೇಖಾ, ನಾರಾಯಣ್, ಇತರರು ಉಪಸ್ಥಿತರಿದ್ದರು.
