July 29, 2026
0001

ಹಿರಿಯೂರು :

ನಗರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದ್ದು, ಇಂತಹ ಕೆಲಸವನ್ನು ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಮೆಚ್ಚುಗೆ ಗಳಿಸಿರುವ ಶ್ರೀಮತಿ ಮಂಜುಳಾರವರಂತೆ  ನಗರಸಭೆಯ ಪ್ರತಿಯೊಬ್ಬ ವ್ಯಕ್ತಿಯೂ ಕೆಲಸ ನಿರ್ವಹಿಸಬೇಕು ಎಂಬುದಾಗಿ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಹೇಳಿದರು.

ನಗರದ “ವೈಟ್-ವಾಲ್” ಸಭಾಂಗಣದಲ್ಲಿ ಪೌರನೌಕರರ ಸಂಘದ ವತಿಯಿಂದ ಹಿರಿಯೂರು ನಗರಸಭೆ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ಬಿ.ಆರ್.ಮಂಜುಳಾರವರ ವಯೋನಿವೃತ್ತಿ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ಅಯೋಸಿಯೇಷನ್ ನಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರೂ ಉತ್ತಮ ಕೆಲಸ ನಿರ್ವಹಿಸುವ ಮೂಲಕ ಶ್ರೇಷ್ಠ ಅಧಿಕಾರಿಗಳಾಗಿ ಹೆಸರು ಗೌರವ ಸಂಪಾದಿಸಿದ್ದಾರೆ, ನಮ್ಮ ಅಸೋಸಿಯೇಷನ್ ಪೌರನೌಕರರಿಗೆ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದರಿಂದ ಹಿಡಿದು, ಅವರ ಕೆಲಸ ಕಾರ್ಯಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದರ ಬಗ್ಗೆ ಅಗತ್ಯವಾದ ತರಬೇತಿಯನ್ನು ನೀಡುತ್ತದೆ, ಎಂದರಲ್ಲದೆ,

ನಗರಸಭೆ ಅಧಿಕಾರಿಗಳು, ಪೌರನೌಕರರು, ಸಾರ್ವಜನಿಕರ ಕಷ್ಟಕಾರ್ಪಣ್ಯಗಳಿಗೆ, ತುರ್ತು ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಶ್ರೀಮತಿ ಬಿ.ಆರ್.ಮಂಜುಳಾರವರಂತೆ ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಜನಪರ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು, ಎಂತಹ ಸಂದರ್ಭದಲ್ಲಿಯೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಾರದು, ಜನರಿಗೆ ಸ್ಪಂದಿಸಿ ಕೆಲಸ ನಿರ್ವಹಿಸಿದರೆ ಮಾತ್ರ ನಿಮ್ಮ ನಿವೃತ್ತಿಯ ದಿನ ಹೀಗೆ ಜನಸೇರಲು ಸಾಧ್ಯ ಎಂಬುದಾಗಿ ಹೇಳಿದರು.

ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಮಾತನಾಡಿ, ಶ್ರೀಮತಿ ಬಿ.ಆರ್.ಮಂಜುಳಾರವರು ಚಿತ್ರದುರ್ಗ ಹಾಗೂ ಹಿರಿಯೂರು ನಗರಸಭೆಯಲ್ಲಿ ಸುಮಾರು 30 ವರ್ಷಗಳ ಕಾಲ ದಕ್ಷತೆ, ಪ್ರಾಮಾಣಿಕತೆ, ಹಾಗೂ ದಿಟ್ಟತನದಿಂದ ಕೆಲಸ ನಿರ್ವಹಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ, ಇವರು ತಮ್ಮ ನಿವೃತ್ತಿಯ ನಂತರ ರಾಜಕೀಯವಾಗಿ ರಂಗದಲ್ಲಿ ಸಕ್ರಿಯವಾಗುವ ಭಾಗವಹಿಸುವ ಮೂಲಕ ಜನಸೇವೆ ಮಾಡುವಂತಾಗಲಿ ಎಂಬುದಾಗಿ ಹೇಳಿದರು.

ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಸುನೀತಾ ಮಲ್ಲಿಕಾರ್ಜುನ್ ಮಾತನಾಡಿ, ಶ್ರೀಮತಿ ಬಿ.ಆರ್.ಮಂಜುಳಾರವರು ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಗರಸಭೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಿ,  ತಮ್ಮ ಕರ್ತವ್ಯನಿಷ್ಠೆ, ದಕ್ಷತೆ, ಪ್ರಾಮಾಣಿಕತೆಯಿಂದ ಜನರ ಮೆಚ್ಚಗೆಗೆ ಪಾತ್ರರಾಗಿದ್ದು, ಇವರ ಮುಂದಿನ ನಿವೃತ್ತಿ ಜೀವನದಲ್ಲೂ ಸಹ ಜನಸೇವೆ ಮುಂದುವರೆಸಲಿ ಎಂಬುದಾಗಿ ಹೇಳಿದರು.

ಸಮಾಜ ಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡಿ, ಶ್ರೀಮತಿ ಬಿ.ಆರ್.ಮಂಜುಳಾರವರು ವೃತ್ತಿಯಲ್ಲಿ ನಿವೃತ್ತರಾಗಿದ್ದಾರೆ, ಅವರು ಪ್ರವೃತ್ತಿಯಿಂದ ನಿವೃತ್ತರಾಗದೇ ರಾಜಕೀಯ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಮತ್ತೆ ತಮ್ಮ ಜನಪರ ಕೆಲಸಗಳನ್ನು ಮುಂದುವರೆಸಲಿ, ಅವರ ನಿವೃತ್ತಿಯ ಜೀವನವು ಅತ್ಯಂತ ಸುಖಮಯವಾಗಿರಲಿ ಎಂಬುದಾಗಿ ಶುಭಹಾರೈಸಿದರು.  

ನಗರಸಭೆ ಮಾಜಿ ಉಪಾಧ್ಯಕ್ಷರಾದ ಬಿ.ಎನ್. ಪ್ರಕಾಶ್ ಮಾತನಾಡಿ, ನಗರಸಭೆ ಕಚೇರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ, ಇದೀಗ ನಿವೃತ್ತಿ ಹೊಂದುತ್ತಿರುವ ಸರಳ, ಸಜ್ಜನಿಕೆ, ಸ್ನೇಹಮಯ  ವ್ಯಕ್ತಿತ್ವದ ಶ್ರೀಮತಿ ಬಿ.ಆರ್.ಮಂಜುಳಾರವರ ನಿವೃತ್ತಿ ಜೀವನವು ಅತ್ಯಂತ ಸಂತಸ, ಸಂಭ್ರಮದಿಂದ ಕೂಡಿರಲಿ ಎಂಬುದಾಗಿ ಶುಭಹಾರೈಸಿದರು.

ಹಿರಿಯ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪನವರು ಮಾತನಾಡಿ, ಶ್ರೀಮತಿ ಬಿ.ಆರ್.ಮಂಜುಳಾರವರು ನಗರಸಭೆ ವ್ಯವಸ್ಥಾಪಕರಾಗಿ ನಗರಸಭೆಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಜನರ ಪ್ರೀತಿ ಅಭಿಮಾನ ಗಳಿಸಿದ್ದಾರೆ, ಅವರ ಈ ಜನಸ್ನೇಹಿ ಕಾರ್ಯವೈಖರಿ ಇದೀಗ ಇವರ ಬೀಳ್ಕೊಡುಗೆ ಸಮಾರಂಭಕ್ಕೆ ಬಂದಿರುವ ಇಷ್ಟೊಂದು ಜನರ ಪ್ರೀತಿ ಅಭಿಮಾನಕ್ಕೆ ಕಾರಣವಾಗಿದೆ ಎಂಬುದಾಗಿ ಹೇಳಿದರು.

ವಯೋನಿವೃತ್ತಿ ಹೊಂದಿದ ಶ್ರೀಮತಿ ಬಿ.ಆರ್.ಮಂಜುಳಾರವರು ಮಾತನಾಡಿ, ಚಿತ್ರದುರ್ಗ ಹಾಗೂ ಹಿರಿಯೂರು ನಗರಸಭೆ ಎರಡಲ್ಲೂ ಜನಪರವಾಗಿ ಕೆಲಸ ನಿರ್ವಹಿಸುವ ಮೂಲಕ ಜನಪ್ರಿಯತೆ ಗಳಿಸಲು ನನಗೆ ಬೆಂಬಲವಾಗಿ ನಿಂತ ನಗರಸಭೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಸಿಬ್ಬಂದಿವರ್ಗದವರ ಬೆಂಬಲ, ಪ್ರೀತಿ, ಪ್ರೋತ್ಸಾಹ ಕಾರಣವಾಗಿದ್ದು, ನಿಮ್ಮೆಲ್ಲರ ಸಹಕಾರವೇ ನನ್ನ ಯಶಸ್ಸಿಗೆ ಮುಖ್ಯ ಕಾರಣವಾಗಿದೆ ಎಂಬುದಾಗಿ ಭಾವಪರವಶರಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್, ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಜಿ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷೆ  ಶ್ರೀಮತಿ ಸುನೀತಾ ಮಲ್ಲಿಕಾರ್ಜುನ್, ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ರುದ್ರಾಣಿ, ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿ ಶ್ರೀಮತಿ ತುಷಾರಮಣಿ, ನಗರಸಭೆ ಮಾಜಿ ಅಧ್ಯಕ್ಷ ಗೊಪ್ಪೆಮಂಜುನಾಥ್, ಕರವೇ ಜಿಲ್ಲಾಧ್ಯಕ್ಷ ರಮೇಶ್, ಚಿತ್ರದುರ್ಗ ನಗರಸಭೆ ಸದಸ್ಯರುಗಳಾದ ಭಾಸ್ಕರ್ ಸೋಮಣ್ಣ, ನೂರುಲ್ಲಾ, ದೀಪಕ್, ಫಕೃದ್ದೀನ್, ಮಹೇಶ್, ಪೂಜಾ, ಶಶಿಧರ್, ಸುರೇಶ್, ಸೇರಿದಂತೆ ಹಿರಿಯೂರು ನಗರಸಭೆ ಪೌರಾಯುಕ್ತರಾದ ಎ.ವಾಸಿಂ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಹನುಮಂತರಾಜು, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಈ.ಮಂಜುನಾಥ್, ಬಾಲಕೃಷ್ಣ, ಶ್ರೀಮತಿ ಗೀತಾ ಗಂಗಾಧರ್, ಮಾಜಿ ಉಪಾಧ್ಯಕ್ಷರಾದ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಮಮತಾ, ನಗರಸಭೆ ಮಾಜಿ ಸದಸ್ಯ ಎಂ.ಡಿ.ಸಣ್ಣಪ್ಪ, ಮಾಜಿ ಉಪಾಧ್ಯಕ್ಷೆ ಮಂಜುಳಾ, ಸೇರಿದಂತೆ ನಗರಸಭೆ ಅಧಿಕಾರಿಗಳಾದ ಶ್ರೀಮತಿ ಸಂದ್ಯಾ, ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *