May 6, 2026
0001

ಚಿತ್ರದುರ್ಗ :

ಜಿಲ್ಲೆಯಲ್ಲಿ ಮುಂಗಾರು ಮಳೆಯು ಸೆಪ್ಟೆಂಬರ್ ತಿಂಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದರಿಂದ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ, ಅತಿ ಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಶೇಂಗಾ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ, ಆದ್ದರಿಂದ ಈ ಕೂಡಲೇ ಸರ್ಕಾರ ಬೆಳೆವಿಮೆ ಬಿಡುಗಡೆ ಮಾಡಬೇಕು ಎಂಬುದಾಗಿ ರಾಜ್ಯ ರೈತಸಂಘದ ಮುಖಂಡರಾದ ಕೆ.ಪಿ.ಭೂತಯ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ, ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2025-26 ನೇ ಸಾಲಿನ ಮುಂಗಾರು ಬೆಳೆ ವಿಮೆ ಬಿಡುಗಡೆ ಮಾಡಲು ವಿಳಂಬ ಮಾಡುವುದನ್ನು ಖಂಡಿಸಿ, ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.

ಚಳ್ಳಕೆರೆ ಕಚೇರಿ ಮುಂಭಾಗದಲ್ಲಿ ಮಾರ್ಚ್ 2 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಾಗ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಹಾಗೂ ಚಳ್ಳಕೆರೆ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉಪವಾಸ ಸತ್ಯಾಗ್ರಹ ಕೈ ಬಿಡಿ ಹದಿನೈದು ದಿನಗಳೊಳಗೆ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ ಮಾಡುತ್ತೇವೆಂದು ಭರವಸೆ ಕೊಟ್ಟಾಗ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆದೆವು.

ಜಿಲ್ಲಾಧಿಕಾರಿಗಳು ಸಹ ಅನೇಕ ಬಾರಿ ಮನವಿ ಮಾಡಿಕೊಂಡಾಗ ಕೂಡಲೇ ಬೆಳೆ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ ಆದರೂ ಕೂಡ ಇದುವರೆಗೂ ಬೆಳೆವಿಮೆ ಹಣ ಮಂಜೂರು ಮಾಡಿರುವುದಿಲ್ಲ ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 80 ಜನ ರೈತರಿಗೆ ಫೆಬ್ರವರಿ  2ರಂದು ಒರೆಂಟಿಯಲ್ ವಿಮಾ ಕಂಪನಿ 80 ಜನ ರೈತರಿಗೆ ಬೆಳೆವಿಮೆ ಹಣ ಪಾವತಿ ಮಾಡಿರುತ್ತಾರೆ.

ಅದೇ ರೀತಿಯಾಗಿ ಜಿಲ್ಲೆಯ ಉಳಿದ ವಿಮಾ ಕಟ್ಟಿದ ಎಲ್ಲಾ ರೈತರಿಗೆ ಏಕೆ ಹಣ ಮಂಜೂರು ಮಾಡಿರುವುದಿಲ್ಲ, ಇಂತಹ ಮೋಸದ ವಿಮಾ ಕಂಪನಿ ಹಗಲು ದರೋಡೆ ಮಾಡಿದ ಮತ್ತು ರೈತರಿಗೆ ಮೋಸ ಮಾಡಿದ ಒರೆಂಟಿಯಲ್ ವಿಮಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಮೊಕದ್ದಮೆ ದಾಖಲಿಸಬೇಕೆಂದು ಈ ಮೂಲಕ ಅವರು ಒತ್ತಾಯಿಸಿದರು.

ಈ ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಜಿಲ್ಲೆಯ ರೈತರಿಗೆ ಬೆಳೆವಿಮೆ ಜಮಾ ಮಾಡದೆ ಇದ್ದಲ್ಲಿ, ಜಿಲ್ಲೆಯ ಎಲ್ಲಾ ರೈತರು ಒಗ್ಗಟ್ಟಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ, ಇದೇ ಮೇ 7ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ಮಾಡಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಯುವಘಟಕದ ಅಧ್ಯಕ್ಷರಾದ ಚೇತನ್ ಯಳನಾಡು, ತಾಲ್ಲೂಕು ಅಧ್ಯಕ್ಷರಾದ ಟಿ.ಹಂಪಣ್ಣ, ಎಂ.ಎಸ್.ಪ್ರಭು, ಜಿ.ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಇಸಾಮುದ್ರ, ಧನಂಜಯ್, ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *