
ಹಿರಿಯೂರು :
ತಾಲ್ಲೂಕಿನ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು 2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಮಾಡಿಕೊಳ್ಳುವಾಗ ಕನಿಷ್ಠ 6 ವರ್ಷ ತುಂಬಿರಬೇಕೆಂಬ ಶಿಕ್ಷಣ ಇಲಾಖೆ ನಿಗದಿಗೊಳಿಸಿದ್ದ ನಿಯಮವನ್ನು, ಇದೀಗ 5 ವರ್ಷ 10 ತಿಂಗಳಿಗೆ ಇಳಿಸಲಾಗಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಾಲ್ಲೂಕಿನ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಶಾಲಾ ಮುಖ್ಯಶಿಕ್ಷಕರುಗಳಿಗೆ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಈ ವರ್ಷದ ಜೂನ್ ತಿಂಗಳ ಶಾಲಾ ಆರಂಭದ ದಿನಾಂಕಕ್ಕೆ ಒಂದನೇ ತರಗತಿಗೆ ದಾಖಲಾಗುವ ಮಗುವಿಗೆ 6 ವರ್ಷಕ್ಕೆ ಸುಮಾರು 60 ದಿನಗಳು ಅಂದರೆ 2 ತಿಂಗಳುಗಳ ವಯೋಮಿತಿ ಕಡಿಮೆಯಿದ್ದರೂ ಶಾಲೆಗೆ ದಾಖಲಾತಿಯನ್ನು ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅವಕಾಶ ನೀಡಲಾಗಿದೆ ಎಂಬುದಾಗಿ ಅವರು ಹೇಳಿದರು.

ಈಗಾಗಲೇ ಎಪ್ರಿಲ್ 10 ರಂದು ತಾಲ್ಲೂಕಿನ ಎಲ್ಲಾ ಶಾಲೆಗಳು ಫಲಿತಾಂಶ ಪ್ರಕಟಿಸಲಾಗಿದ್ದು, ಇನ್ನು ಇದರಲ್ಲಿ ಬಹಳಷ್ಟು ಶಾಲೆಗಳು ಅಂತಿಮ ಪರೀಕ್ಷೆಯ ಅಂಕಗಳು ಮತ್ತು ಗ್ರೇಡ್ ಗಳನ್ನು ಸ್ಯಾಟ್ಸ್ ನಲ್ಲಿ ನಮೂದಿಸಲಾಗಿಲ್ಲ, ಅದನ್ನು ಆದಷ್ಟು ಬೇಗ ಸ್ಯಾಟ್ಸ್ ನಲ್ಲಿ ನಮೂದಿಸುವ ಮೂಲಕ ಶಿಕ್ಷಣ ಇಲಾಖೆಗೆ ಸಹಕಾರ ನೀಡಬೇಕು ಎಂದರಲ್ಲದೆ,
ಈ 2026-27 ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಕಳೆದ ವರ್ಷದ ಆಡಿಟ್ ಗೆ ಅನುಗುಣವಾಗಿ ಶುಲ್ಕ ಪರಿಷ್ಕರಣೆ ಮಾಡಿ, ಶುಲ್ಕಪಟ್ಟಿಯನ್ನು ಕಡ್ಡಾಯವಾಗಿ ಶಾಲೆಯ ಆಡಳಿತ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತಹ ಜಾಗದಲ್ಲಿ ಪ್ರಕಟಿಸಬೇಕು, ಈ ಪ್ರಕಟಣೆಯಲ್ಲಿ ಶುಲ್ಕ ನಿಗದಿ ಜೊತೆಗೆ ಶುಲ್ಕದ ಕಂತುಗಳ ಬಗ್ಗೆ ಸಹ ಮಾಹಿತಿ ನೀಡಬೇಕು ಎಂದರಲ್ಲದೆ,

ಶಾಲೆಗೆ ದಾಖಲಾತಿ ಮಾಡಿಕೊಳ್ಳುವಾಗ ಮಕ್ಕಳ ಜನನ ಪ್ರಮಾಣಪತ್ರ, ಮಕ್ಕಳ ಮತ್ತು ಪೋಷಕರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮತ್ತು ಜಾತಿ ಪ್ರಮಾಣಪತ್ರಗಳನ್ನು ಪಡೆದು, ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು, ಸರಿಯಾದ ಕರಾರುವಕ್ಕಾದ ಮಾಹಿತಿ ಸಂಗ್ರಹಿಸಿ, ದಾಖಲಾತಿ ರಿಜಿಸ್ಟರ್ ನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ನಮೂದಿಸಬೇಕು ಎಂಬುದಾಗಿ ಹೇಳಿದರು.
ಈ ದಾಖಲಾತಿಗಳನ್ನು ದಾಖಲಾತಿ ರಿಜಿಸ್ಟರ್ ನಲ್ಲಿ ನಮೂದಿಸುವಾಗ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ಈ ದಾಖಲಾತಿಯನ್ನು ಒಬ್ಬರು ಬರೆದರೆ, ಅದನ್ನು ಇನ್ನೊಬ್ಬರು ಓದಿ, ಪರಿಶೀಲಿಸಬೇಕು, ತದನಂತರ ಮುಖ್ಯಶಿಕ್ಷಕರು ಪರಿಶೀಲಿಸಿ, ಸಹಿ ಮಾಡಿದಲ್ಲಿ ಮುಂದೆ ತಿದ್ದುಪಡಿಗೆ ಅವಕಾಶ ಇಲ್ಲದಂತೆ ತಿದ್ದುಪಡಿ ಕಡಿಮೆಯಾಗುತ್ತದೆ

ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಶಿಕ್ಷಣ ಇಲಾಖೆ ನಿಗದಿಪಡಿಸಿದ ಸ್ಟೇಟ್ ಸೆಲೆಬಸ್ ಪಠ್ಯಪುಸ್ತಕಗಳನ್ನು ಮಾತ್ರ ಶಾಲೆಗಳಲ್ಲಿ ಬಳಕೆ ಮಾಡಬೇಕು, ದೈಹಿಕ ಶಿಕ್ಷಣ ಹಾಗೂ ಮೌಲ್ಯಶಿಕ್ಷಣ ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಹೊರೆಯಾಗುವಂತಹ ಹೆಚ್ಚುವರಿ ಪಠ್ಯಪುಸ್ತಕಗಳನ್ನು ಬಳಸಬಾರದು,
ಸರ್ಕಾರ ನಿಗದಿಪಡಿಸಿರುವಂತೆ ಶಾಲಾ ಮಕ್ಕಳಿಗೆ ಹೊರೆಯಾಗದಂತಹ ಬ್ಯಾಗ್ ಗಳನ್ನು ಬಳಸಬೇಕು ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಬ್ಯಾಗ್ ಹೊರೆ ಕಡಿಮೆ ಮಾಡಿ, ಆ ದಿನದ ವೇಳಾಪಟ್ಟಿಯಲ್ಲಿರುವಂತೆ ಅಗತ್ಯವಿರುವ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಿಸಿಕೊಳ್ಳತಕ್ಕದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ ಎಂದರು.
ಅನುದಾನ ರಹಿತ ಖಾಸಗಿ ಶಾಲೆಗಳು ತರಗತಿಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯಗಳು, ಹಾಗೂ 18*20 ಉದ್ದಳತೆಯ ಕೊಠಡಿಗಳನ್ನು ಹೊಂದಿರಬೇಕು, ಅಲ್ಲದೆ ಅರ್ಹತೆಯಿರುವ ಶಿಕ್ಷಕ-ಶಿಕ್ಷಕಿಯವರನ್ನು ಮಾತ್ರ ಶಾಲೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು
ಅರ್ಹ ಶಿಕ್ಷಕರಿಗೆ ನೇಮಕಾತಿ ಪತ್ರ ನೀಡುವುದರ ಜೊತೆಗೆ ಎಸ್.ಆರ್.ಪುಸ್ತಕವನ್ನು ಆರಂಭಿಸಬೇಕು, ಶಿಕ್ಷಕ-ಶಿಕ್ಷಕಿಯರಿಗೆ ಬ್ಯಾಂಕ್ ಮೂಲಕ ಸಂಬಳ ನೀಡಬೇಕು, ಶಾಲಾ ವಾಹನ ಬಳಸುತ್ತಿದ್ದರೆ ಇಲಾಖೆಯಿಂದ ಅನುಮತಿ ಪಡೆಯುವ ಜೊತೆಗೆ ವಾಹನ ಇನ್ಸುರೆನ್ಸ್, ಜಿ.ಪಿ.ಆರ್.ಎಸ್, ಪ್ಯಾನಿಕ್ ಬಟನ್, ಫಿಟ್ ನೆಸ್ ಸರ್ಟಿಫಿಕೇಟ್ ಪಡೆದು ಸುಸ್ಥಿತಿಯಲ್ಲಿಟ್ಟಿರಬೇಕಲ್ಲದೆ ಚಾಲಕರಿಗೆ ಕಡ್ಡಾಯವಾಗಿ ಪೋಲೀಸ್ ವೆರಿಫಿಕೇಶನ್ ಆಗಿರಬೇಕು.
ನಗರದಲ್ಲಿ ಕೆಲವು ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಸಮಯವನ್ನು ಅವರಿಗೆ ಮನಬಂದಂತೆ ಬಳಸುತ್ತಿದ್ದು, ಇದುಸರಿಯಲ್ಲ, ಸರ್ಕಾರದ ವೇಳಾಪಟ್ಟಿಯಂತೆ ಇಲಾಖೆ ನಿಗದಿಪಡಿಸಿರುವಂತೆ ಶಾಲಾ ಸಮಯ ಹಾಗೂ ರಜಾದಿನಗಳನ್ನು ಇಲಾಖೆಯ ಅನುಮತಿ ಪಡೆದು ಯೂನಿವರ್ಸೆಲ್ ಆಗಿ ಶಾಲೆಗಳು ಒಂದೇ ಸಮಯ ಅಳವಡಿಸಿಕೊಳ್ಳಬೇಕು ಎಂದರು.
ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆಗೆ ನೀಡುವ ಆನ್ ಲೈನ್ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಸರಿಯಾದ ಸಮಯದಲ್ಲಿ ಸಲ್ಲಿಸಬೇಕು, ಇಲ್ಲವಾದಲ್ಲಿ ಶಾಲೆಯವರೇ ಜವಾಬ್ದಾರರಾಗಿರುತ್ತಾರೆ, ಶಾಲೆಯಿಂದ ಹೊರ ಹೋಗುವ ವಿದ್ಯಾರ್ಥಿಗಳ ಟಿಸಿಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು,
ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಹಾಗೂ ಪೋಷಕರ ಸಮಿತಿ ನಿರ್ಮಿಸಿಕೊಂಡು ಆಗಾಗ್ಗೆ ಸಭೆ ಸೇರಿ ಚರ್ಚಿಸಿಕೊಳ್ಳುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು, ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು “ಮಿಂಚಿನ ಸಂಚಾರ”ದ ಮೂಲಕ ಎಲ್ಲವನ್ನು ಪರಿಶೀಲಿಸಲಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಆರ್.ಟಿ.ಶ್ರೀನಿವಾಸ್, ಶಿಕ್ಷಣ ಇಲಾಖೆಯ ಶಿಕ್ಷಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಶಿವಪ್ರಸಾದ್, ಶಿಕ್ಷಣ ಸಂಯೋಜಕರಾದ ಎಂ.ಕೆ.ಸೈಯದ್ ಜಾಫರ್ ಸಾಧಿಕ್, ಸೇರಿದಂತೆ ತಾಲ್ಲೂಕಿನ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಮುಖ್ಯಶಿಕ್ಷಕರುಗಳು ಪಾಲ್ಗೊಂಡಿದ್ದರು.
