April 16, 2026
000003

ಹಿರಿಯೂರು :

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅಸ್ಮಿತೆಯನ್ನು ಉಳಿಸಿ, ಬೆಳೆಸುವ ಅಂಗಸಂಸ್ಥೆಯಾಗಿದ್ದು,  ನಾಲ್ವಡಿ ಕೃಷ್ಣರಾಜರು ಒಡೆಯರು 1915ರಲ್ಲಿ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ ಈ ನೆಲದ ಜಲಸಂಪತ್ತು ಪರಂಪರೆಯನ್ನು ಕಾಪಾಡುವ ಹೊಣೆಗಾರಿಕೆ ಹೊಂದಿದೆ, ಆದರೆ  ಸಾಹಿತ್ಯ ಪರಿಷತ್ತಿನಿಂದ ಅಂತಹ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂಬುದಾಗಿ ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ನಗರದ ನೆಹರು ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಸಭಾ ಹೋಬಳಿಯ “ಪ್ರಥಮ ಸಾಹಿತ್ಯ ಸಮ್ಮೇಳನ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಮುದಾಯದ ಸಂಸ್ಕೃತಿ ಭಾಷೆ ಸಾಧನೆ ಗುರುತಿಸುವ ಬದಲಾಗಿ ತಿರುಚುವ ಕೆಲಸ ನಡೆಯುತ್ತಿದೆ, ಮೈಸೂರಿನ ಕೃಷ್ಣರಾಜಸಾಗರ ಕನ್ನಂಬಾಡಿ ಅಣೆಕಟ್ಟು ಕಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು ಆದರೆ ಚಲನಚಿತ್ರಗಳಲ್ಲಿ ಸರಿ, ವಿಶ್ವೇಶ್ವರಯ್ಯ ಕಟ್ಟಿದ್ದು ಎಂದು ಹೇಳಲಾಗುತ್ತಿದೆ,

ಆದರೆ ಇದು ಇತಿಹಾಸ ತಿರುಚುವ ಕೆಲಸವಾಗಿದೆ, ಆದಿಕವಿ ಪಂಪನಿಂದ ಹಿಡಿದು ಕುವೆಂಪುವರೆಗೂ ಕನ್ನಡ ಸಾಹಿತ್ಯ ತನ್ನದೇ ಆದ ಪರಂಪರೆ ಹೊಂದಿದ್ದು, ಮನುಜಮತ ವಿಶ್ವಪಥ ಎಂಬುದನ್ನು ಸಾರಿದೆ ಎಂಬುದಾಗಿ ಹೇಳಿದರು

ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ ಆರಂಭವಾಗಿ 35 ವರ್ಷಗಳು ಕಳೆದಿವೆ. ಆದರೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ,  ಇದಕ್ಕೆ ಸರ್ಕಾರಗಳು ಇಚ್ಛಾ ಶಕ್ತಿಯ ಕೊರತೆ ಕಾರಣವಾಗಿದೆ ಎಂದರಲ್ಲದೆ,

ಕನ್ನಡ ಭಾಷೆ ನೆಲ ಜಲ ಹೋರಾಟವೆಂದರೆ ಜನರು ಬರುವುದಿಲ್ಲ, ಜನರಲ್ಲಿ ಕನ್ನಡಪ್ರಜ್ಞೆ ಬೆಳೆಯಬೇಕು ಸಾಹಿತ್ಯ ಚಟುವಟಿಕೆಗಳನ್ನು ಯುವಶಕ್ತಿ ಕೈಗೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ ಎಂಬುದಾಗಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಕರಿಯಪ್ಪಮಾಳಿಗೆ ಮಾತನಾಡಿ, ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕಾರ ಮತ್ತು ಸಂಸ್ಕೃತಿ ಹೊಂದಿರುವ ವಿಶ್ವದ ಏಕೈಕ ಭಾಷೆ ಕನ್ನಡ, ಈ ಭಾಷೆಯಿಂದ ಮಾತ್ರ ನಮ್ಮ ಸಂಕಟ ವೇದನೆ ದುಃಖ ದುಮ್ಮಾನ ಗಳನ್ನು ಹೇಳಿಕೊಳ್ಳಲು ಸಾಧ್ಯ, ಆದ್ದರಿಂದ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಅತ್ಯಗತ್ಯವಿದೆ ಎಂಬುದಾಗಿ ಹೇಳಿದರು.

ಸಮ್ಮೇಳನದ ಅಧ್ಯಕ್ಷರಾದ ಜಿ.ಡಿ.ಚಿತ್ತಣ್ಣಸೀಗೆಹಟ್ಟಿ ಮಾತನಾಡಿ, ಕನ್ನಡಭಾಷೆ ವಿಶ್ವದಲ್ಲಿ ಅತಿ ಸುಂದರವಾದ ಭಾಷೆ ಇದನ್ನು ಕಲಿಯುವುದು ತುಂಬಾ ಸರಳ, ಇಂತಹ ಭಾಷೆಗೆ 2000 ವರ್ಷಗಳ ಇತಿಹಾಸವಿದ್ದು, ಕವಿ ಪಂಪನಿಂದ ಇಂದಿನ ಹಂಪನಾವರೆಗೂ ಸಾವಿರಾರು ಕವಿಗಳು ಸಾವಿರಾರು ಕೃತಿಗಳನ್ನು ನಾಡಿಗೆ ನೀಡಿದ್ದಾರೆ, ಅವರ ಹೆಜ್ಜೆ ಗುರುತುಗಳು ಸ್ಮರಿಸುವ ಕೆಲಸ ಆಗಬೇಕಿದೆ ಎಂದರಲ್ಲದೆ,

ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು, ಹಿರಿಯೂರಿನ ಜೀವನಾಡಿ ಹಾಗೂ ರೈತರ ಬದುಕಿನ ಅಸ್ಮಿತೆ ಸಾರುವ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು, ಇದರಿಂದ ಸಾವಿರಾರು ಜನರಿಗೆ ಉದ್ಯೋಗ ಮತ್ತು ಆರ್ಥಿಕ ಭದ್ರತೆ ದೊರೆಯುತ್ತದೆ

ಜೊತೆಗೆ ಹಿರಿಯೂರು ತಾಲೂಕಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು, ಸಾಂಸ್ಕೃತಿಕ ಚಟುವಟಿಕೆ ಸಾಹಿತ್ಯ ಸಂಗೀತ ರಂಗಕಲೆಗೆ ಸಂಬಂಧಿಸಿದ ಕಾರ್ಯಕ್ರಮ ಮಾಡಲು ಕನ್ನಡ ಭವನ ನಿರ್ಮಾಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದರು.

ಶಿರಾ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಯ್ಯಬೆಳವಾಡಿ ಮಾತನಾಡಿ, ಸಮ್ಮೇಳನ ಅಧ್ಯಕ್ಷ ಜಿ.ಡಿ.ಚಿತ್ತಣ್ಣನವರು ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಕುಟುಂಬದಿಂದ ಬಂದಿದ್ದು, ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ, ತಾಲೂಕಿನಲ್ಲಿ ಇದೇ ಮೊದಲ ಬಾರಿ ಕಾಡುಗೊಲ್ಲ ಸಮಾಜದ ವ್ಯಕ್ತಿಯನ್ನು ಗುರುತಿಸಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂಬುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ರಾಜ್ಯ ಒಕ್ಕಲಿಗ ಸಂಘದ ದಂತ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಜು ಬೇತೂರುಪಾಳ್ಯ, ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಸಿಂಡಿಕೇಟ್ ಸದಸ್ಯ ಎಚ್.ತಿಪ್ಪೇಸ್ವಾಮಿ, ಚಿತ್ರನಟರಾದ ರಾಜೇಶ್ ನಟರಂಗ, ರಾಣವ, ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಹುಚ್ಚವನಹಳ್ಳಿ ಪ್ರಸನ್ನ, ಕಾರ್ಯದರ್ಶಿ ಅಜ್ಗರ್ ಅಹ್ಮದ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ, ರೈತ ಸಂಘದ ವಿಭಾಗೀಯ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ರೈತ ಮುಖಂಡರಾದ ಕಸವನಹಳ್ಳಿರಮೇಶ್, ಜೆಡಿಎಸ್ ತಾಲೂಕ ಅಧ್ಯಕ್ಷ ಎನ್.ಹನುಮಂತರಾಯಪ್ಪ, ಟಿ.ಕೃಷ್ಣಮೂರ್ತಿ, ಪಿ.ಆರ್.ದಾಸ್, ಜಿ.ಎಲ್.ಮೂರ್ತಿ, ಕಲ್ಲಟ್ಟಿಹರೀಶ್, ಡಾ.ನವೀನ್ ಮಸ್ಕಲ್, ತಿಮ್ಮಣ್ಣ ಮ್ಯಾಕ್ಲೂರಹಳ್ಳಿ, ರಂಗಯ್ಯ, ಇಜಿಎಸ್.ಗೋವಿಂದಪ್ಪ, ಪದ್ಮನಾಥ್, ಮಹೇಶ್, ಉಮಾಶಂಕರ್, ಗಡಾರಿ ಕೃಷ್ಣಪ್ಪ, ಎಂರವೀಂದ್ರನಾಥ್, ಕಿರಣ್ ಮಿರಜ್ಕರ್, ಪ್ರವೀಣ್ ಬೆಳಗೆರೆ, ಕೆ.ಅನಿತಾ ಭಾಗವಹಿಸಿದ್ದರು.

ನಾಡಗೀತೆ ಹಾಗೂ ರೈತ ಗೀತೆ ಗಾಯನವನ್ನು ಕ್ರಮವಾಗಿ ಎಂ.ತ್ರಿವೇಣಿ ಹಾಗೂ ಶಿವಶಂಕರ್ ಮಠದ್ ನಡೆಸಿಕೊಟ್ಟರು. ಇದೇ ವೇಳೆ ಕೆ.ಅನಿತಾ, ಗೋವಿಂದ ಅವರ ಹೆಣ್ಣು ಅಬಲೆ ಅಲ್ಲ ಹಾಗೂ ಪ್ರವೀಣ್ ಬೆಳಗೆರೆಯವರ ಮರಮಾತನಾಡಿದಾಗ ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಕವಿಗೋಷ್ಠಿ ಸಾಧಕರಿಗೆ ಸನ್ಮಾನ ಗೋಷ್ಠಿಗಳು ನಡೆದವು.

About The Author

Leave a Reply

Your email address will not be published. Required fields are marked *