
ಹಿರಿಯೂರು :
ಬಡವರ ಸೇವೆ ಮಾಡುವುದು ನನ್ನ ರಕ್ತದಲ್ಲಿಯೇ ಬೆರೆತಿದೆ, ಅದಕ್ಕಾಗಿಯೇ ನಿರಂತರವಾಗಿ ಬಡವರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ, ಆದರೆ ಇದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ, ಹೀಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ನನಗೆ ತೊಂದರೆ ನೀಡುವ ಪ್ರಯತ್ನ ನಡೆಸಿದರು, ಆದರೆ ಹಿರಿಯೂರಿನ ಜನತೆ ನನ್ನ ಬೆನ್ನಿಗೆ ನಿಂತಿರುವುದರಿಂದ ಅವರ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂಬುದಾಗಿ ಅಟ್ಟಿಕಾ ಗೋಲ್ಡ್ ಕಂಪನಿ ಸಂಸ್ಥಾಪಕರಾದ ಬೊಮ್ಮನಹಳ್ಳಿಬಾಬು ಹೇಳಿದರು.
ನಗರದ ಟಿಬಿವೃತ್ತದಲ್ಲಿ ಬುಧವಾರ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ “ಬಡಜನರಿಗಾಗಿ ಬೊಮ್ಮನಹಳ್ಳಿಬಾಬು ಬಾಬಣ್ಣರಿಗಾಗಿ ಹಿರಿಯೂರಿನ ಜನ” ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಕಷ್ಟದಿಂದ ಮೇಲೆ ಬಂದವನು ಜೀವನದಲ್ಲಿ ಕಷ್ಟ ಅನುಭವಿಸುತ್ತಿರುವವರನ್ನು ಮೇಲಕ್ಕೆ ತರುವುದೇ ನನ್ನ ಕನಸು, ಕರ್ನಾಟಕದ ಅತ್ಯಂತ ಹಿಂದುಳಿದ ಕ್ಷೇತ್ರಗಳ ಪೈಕಿ ಹಿರಿಯೂರು ಕೂಡ ಒಂದಾಗಿದೆ ಇಲ್ಲಿ ಕಡುಬಡವರು ಹಾಗೂ ಹಿಂದುಳಿದ ವರ್ಗಗಳ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅಂತಹ ಜನರ ಸೇವೆ ಮಾಡುವುದರ ಜೊತೆಗೆ ಹಿರಿಯೂರು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಉದ್ದೇಶದಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂಬುದಾಗಿ ಹೇಳಿದರು.
ಹಿರಿಯೂರು ತಾಲೂಕಿನಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟೆ ಇದ್ದರೂ ಕುಡಿಯುವ ನೀರು ಹಾಗೂ ಕೃಷಿಗೆ ಸಮರ್ಪಕ ನೀರಿನಲ್ಲಿ ವ್ಯವಸ್ಥೆ ಇಲ್ಲ, ಜನರಿಗೆ ಉದ್ಯೋಗಾವಕಾಶಗಳ ಕೊರತೆಯಿದೆ, ಉತ್ತಮ ರಸ್ತೆಗಳು ಚರಂಡಿ ವ್ಯವಸ್ಥೆ ಹಾಗೂ ಸಮರ್ಪಕ ಸಾರಿಗೆ ಸೌಲಭ್ಯಗಳು ಇಲ್ಲ, ಅಭಿವೃದ್ಧಿಯೆಂದರೆ ಕೇವಲ ಕ್ಯಾಮರಾ ಮುಂದೆ ನಿಂತು ಭೂಮಿ ಪೂಜೆ ನೆರವೇರಿಸುವುದಲ್ಲ ಜನರ ಬದುಕಿನಲ್ಲಿ ನೈಜ ಬದಲಾವಣೆ ತರುವುದೇ ನಿಜವಾದ ಅಭಿವೃದ್ಧಿ ಎಂದರಲ್ಲದೆ,
ಜನರ ತೆರಿಗೆ ಹಣವನ್ನು ಲೂಟಿ ಮಾಡಿ ಸಂಪಾದಿಸಿದ ಸಂಪತ್ತು ನನಗೆ ನನ್ನ ಬಳಿ ಇಲ್ಲ, ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತು ಮಾತ್ರ ನನ್ನಲ್ಲಿದೆ, ನನ್ನ ಉದ್ಯಮ ದೇಶದ ಕಾನೂನುಗಳನ್ನು ಉಲ್ಲಂಘಿಸಿಲ್ಲ ಕಾನೂನು ಬದ್ಧವಾಗಿ ತೆರಿಗೆ ಪಾವತಿಸಿಯೇ ಉದ್ಯಮ ನಡೆಸುತ್ತಿದ್ದೇನೆ ಎಂಬುದಾಗಿ ಹೇಳಿದರು
ಈ ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀ ರಾಜೇಶ್ವರ ಸ್ವಾಮೀಜಿ ಬಿಜಾಪುರ, ಬ್ರಹ್ಮಶ್ರೀ ರಾಜಗುರು ಬಸ್ತಾರು, ಶ್ರೀ ದಯಾನಂದ ಸ್ವಾಮೀಜಿ, ಶ್ರೀ ಗುರು ಜಯಾನಂದ ಸ್ವಾಮೀಜಿ, ಶ್ರೀ ಗುರು ಜಗಜಂದ ಸ್ವಾಮೀಜಿ, ಶ್ರೀ ಮಂಜು ಗುರು ಶ್ರೀ ಜಯದೇವ ಸ್ವಾಮೀಜಿ, ಶ್ರೀಶ್ರೀಧರ ಸ್ವಾಮೀಜಿ, ಶ್ರೀಮರುಳಸಿದ್ದ ಸ್ವಾಮೀಜಿ, ಶ್ರೀಶಂಕರ ಸ್ವಾಮೀಜಿ, ಶ್ರೀಬಸವರಾಜ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಮಾರ್ಕಂಡೇಯ ಸ್ವಾಮೀಜಿ, ಶ್ರೀಶೇಖರ ಸಿದ್ಧಬಸವ ಸ್ವಾಮೀಜಿ, ಶ್ರೀಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕುಮಾರ ಸಿದ್ಧಾರೂಢ ಸ್ವಾಮೀಜಿ, ಹಝರತ್ ಮೊಹಿದ್ದೀನ್ ಶಾ, ಹಾಫೀಝ್ ಅಹ್ತೇಶ್ಯಾಮ್, ಬಿ.ವಿ.ಮಂಜುಳಾ ಮೊದಲಾದವರು ಪಾಲ್ಗೊಂಡು ಬೊಮ್ಮನಹಳ್ಳಿ ಬಾಬು ಅವರಿಗೆ ಶುಭ ಕೋರಿ ಆಶೀರ್ವದಿಸಿದರು.
